ಹೊನ್ನಾವರ: ವಿ.ಕೃ.ಗೋಕಾಕರು ಶ್ರೇಷ್ಠ ಕವಿಯಾಗಿ, ಶಿಕ್ಷಣತಜ್ಞರಾಗಿ, ಆಡಳಿತಗಾರರಾಗಿ ಕನ್ನಡದ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ಸನಾತನ ಪರಂಪರೆಯಲ್ಲಿ ಶ್ರದ್ಧೆಯಿಟ್ಟುಕೊಂಡ ಮೇಧಾವಿಗಳಾಗಿದ್ದರು. ಅವರ ವಾಙ್ಮಯ ಪ್ರಪಂಚವನ್ನು ಹೊಸತಲೆಮಾರು ಹತ್ತಿರದಿಂದ ನೋಡುವಂತಾಗಬೇಕು ಎಂದು ಡಾ.ಜಿ.ಎಸ್.ಹೆಗಡೆ ಹೇಳಿದರು.
ಅವರು, ಪಟ್ಟಣದ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಬೆಂಗಳೂರಿನ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು ಕ.ಸಾ.ಪ. ಹೊನ್ನಾವರ ಘಟಕದ ಸಹಯೋಗದಲ್ಲಿ ವಿ.ಕೃ.ಗೋಕಾಕ್ ಜನ್ಮದಿನದ ಅಂಗವಾಗಿ ಸೋಮವಾರ ನಡೆದ ವಿಶೇಷ ಉಪನ್ಯಾಸ ಮತ್ತು ಶ್ರಾವಣ ಕವಿಸಂಜೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಗೋಕಾಕರ ಸಾಹಿತ್ಯದಲ್ಲಿ ಎಲ್ಲಿಯೂ ಆವೇಶವಿಲ್ಲ. ವಾಸ್ತವ ಮತ್ತು ಆಧ್ಯಾತ್ಮದ ತಳಹದಿಯ ಮೇಲೆ ರಚಿತವಾದ ಅವರ ಸಾಹಿತ್ಯದ ರಾಶಿಯನ್ನು ಯುವ ತಲೆಮಾರು ಅರಿಯಬೇಕು. ದೇಶದ ಸಾಂಸ್ಕøತಿಕ ರಾಯಭಾರಿಯಂತೆ ಸಂಚರಿಸಿದ ತಪೋನಿಷ್ಠ ದೊಡ್ಡ ಚೇತನ ಗೋಕಾಕರು. ವಿಶ್ವವಿದ್ಯಾಲಯಗಳು ಅವರ ಸಾಹಿತ್ಯವನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಮುಂದಾಗಬೇಕು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಗೋಕಾಕರ ಬಹುಮುಖಿ ವ್ಯಕ್ತಿತ್ವದ ಕುರಿತು ಮಾತನಾಡಿದರು.

ನಂತರ ನಡೆದ
ಶ್ರಾವಣ ಕವಿಸಂಜೆ’ ಕಾರ್ಯಕ್ರಮದಲ್ಲಿ ಪ್ರಭಾಕರ ಹೆಗಡೆ, ಕೃಷ್ಣಮೂರ್ತಿ ಹೆಬ್ಬಾರ್, ಕಮಲಾ ಕೊಂಡದಕುಳಿ, ಡಾ.ಚೈತ್ರ ಕಣ್ಣಿ, ಕೆ.ವಿ.ಹೆಗಡೆ ಹಂದಿಮುಲ್ಲೆ, ಜಿ.ಎಸ್.ಹೆಗಡೆ, ಗಣಪತಿ ಹೆಗೆಡೆ ಕೊಂಡದಕುಳಿ, ಸರಸ್ವತಿ ಗಂಗೊಳ್ಳಿ, ಜಿ.ಎನ.ಹೆಗಡೆ, ಡಾ.ಇಸ್ಮಾಯಿಲ್ ತಲಕಣಿ, ಸುಧಾ ಭಂಡಾರಿ, ವಿನಾಯಕ ನಾಯ್ಕ, ಎಂ.ಎಸ್.ಹೆಗಡೆ, ಶಂಕರ ಗೌಡ, ನಾರಾಯಣ ಹೆಗಡೆ ಕರ್ಕಿ, ವಿದ್ಯಾಧರ ಕಡೋಕಾ, ಪ್ರಮೋದ ಕಡತೋಕಾ ಕವಿತೆ ವಾಚಿಸಿದರು.
ಉತ್ತರಕನ್ನಡ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಹೊನ್ನಾವರ ಘಟಕದ ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ ಮೂಡಲಮನೆ ನಿರೂಪಿಸಿದರು. ಶಶಿಧರ ದೇವಾಡಿಗ ವಂದಿಸಿದರು.
Leave a Comment