ಯಲ್ಲಾಪುರ : ಕರ್ನಾಟಕ ರಸ್ತೆ ಸಾರಿಗೆ ನಿಗಮವು ಜನಗಳ ಆಸ್ತಿ, ಅದರ ಸದ್ಬಳಕೆ ಮಾಡಿಕೊಳ್ಳುವುದು ನಿಮ್ಮ ಹಕ್ಕು ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಧ್ಘಾಟಿಸಿಮಾತನಾಡಿದ ಅವರು ಮಕ್ಕಳಿಗೆ ಉಚಿತವಾಗಿ ಬಸ್ ಪಾಸ್ ಸಿಗದಿದ್ದರೆ ಸರ್ಕಾರವನ್ನು ದೂಷಿಸುವ ಪಾಲಕರು, ಅದೇ ತಮ್ಮ ಮಕ್ಕಳನ್ನು ಬೆಂಗಳೂರಿಗೆ ಕಳುಹಿಸಲು ಖಾಸಗಿ ವಾಹನವನ್ನು ಅವಲಂಬಿಸುತ್ತಾರೆ. ರಾಜ್ಯ ರಸ್ತೆ ಸಾರಿಗೆ ನಿಗಮವು ಜನತೆಗೆಂದು ಇರುವುದು. ಅದನ್ನೆ ನಂಬಿ ಸಾವಿರಾರು ಜನ ಅದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಸದುಪಯೋಗ ಪಡಿಸಿಕೊಳ್ಳುವುದು ಪ್ರತಿ ನಾಗರಿಕರ ಹಕ್ಕು ಎಂದರು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗುರುತಿಸಿರುವ ಕಡಿಮೆ ತೂಕ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದ ಮಕ್ಕಳಿಗೆ ೧೦೦೦ ಪೌಷ್ಟಿಕಾಂಶ ಕಿಟ್ ಅನ್ನು ವೈಯಕ್ತಿಕವಾಗಿ ನೀಡುತ್ತಿದ್ದು, ಅದಕ್ಕೆ ಸಾಂಕೇತಿಕವಾಗಿ ಪೌಷ್ಟಿಕಾಂಶ ಕಿಟ್ ವಿತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ ಸದಸ್ಯ ಶಾಂತಾರಾಮ ಸಿದ್ದಿ, ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್, ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment