ಕಾಸರಕೋಡ ಟೊಂಕ ವಾಣಿಜ್ಯ ಬಂದರು ಯೋಜನೆಗಾಗಿ ಚತುಷ್ಪಥ ರಸ್ತೆ ನಿರ್ಮಿಸುವ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಕಂಪೆನಿಯವರು ಮತ್ತು ಅವರ ಗುತ್ತಿಗೆದಾರರು ಸೇರಿ ಮಂಗಳವಾರ ನಡೆಸಿದ ಇನ್ನೊಂದು ಪ್ರಯತ್ನಕ್ಕೆ ಸ್ಥಳೀಯ ಮೀನುಗಾರರು ಮತ್ತು ಮಹಿಳಾ ಸಂಘಟನೆಯವರು ತಡೆಯುವಲ್ಲಿ ಯಶಸ್ವಿಯಾದರು.
ಬೆಳಿಗ್ಗೆ ಪೋಲೀಸರ ರಕ್ಷಣೆಯಲ್ಲಿ ಹತ್ತಾರು ಜೆಸಿಬಿ ಯಂತ್ರ ಮತ್ತು ಟಿಪ್ಪರ್ ಬಳಸಿ ಕಂಪನಿಯ ಗುತ್ತಿಗೆದಾರರು ಮತ್ತು ಕಂಪನಿ ಕಾರ್ಮಿಕರು ವಾಣಿಜ್ಯ ಬಂದರು ನಿರ್ಮಾಣ ಕಾರ್ಯಕ್ಕೆ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಬಿಸುವ ವಿಫಲ ಯತ್ನ ನಡೆಸಿದರು. ಆದರೆ ನೂರಾರು ಸಂಖ್ಯೆಯಲ್ಲಿ ಮೀನುಗಾರ ಮಹಿಳೆಯರು ಮತ್ತು ಸ್ಥಳೀಯರು ಸಂಘಟಿತರಾಗಿ ರಸ್ತೆ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡಿ ಕಂಪೆನಿ ಕಾರ್ಮಿಕರು ಮತ್ತು ಗುತ್ತಿಗೆದಾರರನ್ನು ಸ್ಥಳದಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

ಈ ನಡುವೆ ಕಂಪೆನಿಯ ಗುತ್ತಿಗೆದಾರರು ಮತ್ತು ಅವರ ಬಾಡಿಗೆ ಜನರು ಸಾರ್ವಜನಿಕರಿಗೆ ಜೀವ ಬೆದರಿಕೆ ಹಾಕಿ ಗುಂಡಾಗಿರಿ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತಾದರು ಪೋಲೀಸರ ಸಮಯಪ್ರಜ್ನೆಯಿಂದಾಗಿ ಯಾವದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ ಜೆಸಿಬಿ ಯಂತ್ರ ಮತ್ತು ಕಂಪನಿಯ ಗುತ್ತಿಗೆದಾರರು ಸಹಿತ ಬಾಡಿಗೆ ಜನರನ್ನು ಸ್ಥಳದಿಂದ ಮರಳಿಕಳಿಸಿದ ಘಟನೆ ನಡೆದಿದೆ.
ಉಚ್ಛ ನ್ಯಾಯಾಲಯದ ತಡೆಯಾಜ್ಞೆ ಸಹಿತ ಮಧ್ಯಂತರ ಆದೇಶವಿದ್ದರು ವಾಣಿಜ್ಯ ಬಂದರು ಯೋಜನೆಗಾಗಿ ಚತುಷ್ಪಥ ರಸ್ತೆ ನಿರ್ಮಿಸುವ ಕಾಮಗಾರಿ ಆರಂಭಿಸುವ ಕಂಪೆನಿಯ ಮತ್ತು ಗುತ್ತಿಗೆದಾರರ ಕ್ರಮವನ್ನು ಸ್ಥಳೀಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಯಾರ ಆದೇಶದ ಮೇರೆಗೆ ಕಾಮಗಾರಿ ಆರಂಭಿಸಲು ಬಂದಿದ್ದೀರಿ? ಆದೇಶ ತೋರಿಸಿ.ಎಂದು ಕಾಮಗಾರಿ ನಡೆಸದಂತೆ ಸ್ಥಳೀಯ ಮಹಿಳೆಯರು ಪ್ರತಿಭಟಿಸಿದರು.ಅಧಿಕಾರಿಗಳು ಮತ್ತು ಕಂಪೆನಿಯು ನ್ಯಾಯಾಲಯದ ಆದೇಶವನ್ನು ಪಾಲಿಸದೇ ಸ್ಥಳೀಯ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ.
ಸಮುದ್ರ ತೀರದಲ್ಲಿ ರಸ್ತೆ ಕಾಮಗಾರಿ ನಡೆಸಲು ಸಿಆರ್ ಝೆಡ್ ಸಹಿತ ವಿವಿಧ ಪರವಾನಿಗೆ ಪಡೆಯಬೇಕಾಗುತ್ತದೆ.ಇಲ್ಲಿ ಅಂತಹ ಯಾವುದೇ ಪರವಾನಿಗೆ ಪಡೆಯಲಾಗಿಲ್ಲ. ಹಾಗಿದ್ದರೂ ಸ್ಥಳೀಯ ಆಡಳಿತವು ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ರೊಂದಿಗೆ ಸಾಮೀಲಾಗಿ ಜನರನ್ನು ಹೆದರಿಸಿಬೆದರಿಸಿ ಹಿಂಬಾಗಿಲಿನಿಂದ ಕಾಮಗಾರಿ ನಡೆಸಲು ಸ್ಥಳೀಯ ಆಡಳಿತ ಪ್ರಯತ್ನಿಸುತ್ತಿದೆ ಎನ್ನುವುದು ಇಂದು ನಡೆದ ಯತ್ನವೇ ಇದಕ್ಕೆ ಸಾಕ್ಷಿ ಎಂದು ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ್ ತಾಂಡೇಲ್, ಗಣಪತಿ ತಾಂಡೇಲ, ಜಗದೀಶ್ ತಾಂಡೇಲ್ ಮತ್ತು ಮಹಿಳಾ ಸಮಿತಿಯವರು ದೂರಿದ್ದಾರೆ.
ವಾಣಿಜ್ಯ ಬಂದರು ಯೋಜನೆಯ ವಿಚಾರ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ ಮತ್ತು ವಿವಿಧ ವಿಷಯಗಳ ಬಗ್ಗೆ ಮಧ್ಯಂತರ ಆದೇಶ ವಿರುವಾಗ ಹಿಂಬಾಗಿಲಿನಿಂದ ಬಂದರು ಯೋಜನೆಗಾಗಿ ರಸ್ತೆಕಾಮಗಾರಿ ನಡೆಸಲು ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಕಂಪೆನಿಯವರು ಮುಂದಾಗಿರುವುದು ಮತ್ತು ಬಾಡಿಗೆ ಜನರನ್ನು ಸ್ಥಳೀಯವಾಗಿ ಬೆದರಿಕೆ ಹಾಕಿ ದುಂಡಾವರ್ತನೆ ತೋರಿರುವ ಕ್ರಮವನ್ನು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ತೀವ್ರವಾಗಿ ಖಂಡಿಸಿದ್ದಾರೆ. ಮತ್ತು ಉಪ ವಿಭಾಗಾಧಿಕಾರಿ ಮಮತಾದೇವಿಯವರ ಗಮನಸೆಳೆದು ಸ್ಥಳೀಯ ಮೀನುಗಾರರ ಹಿತರಕ್ಷಣೆ ಮಾಡುವಂತೆ ಆಗ್ರಹಿಸಿದ್ದಾರೆ.
Leave a Comment