ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಕುರ್ಲೆಜಡ್ಡಿ ಗ್ರಾಮಸ್ಥರು ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಎಲ್ಲಾ ಸ್ಥರದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ನೀಡಿ ಬೇಸತ್ತ ಗ್ರಾಮಸ್ಥರು ರಾಡಿ ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಮಾವಿನಕಟ್ಟಾದಿಂದ 7 ಕಿ.ಮೀ ದೂರದಲ್ಲಿರುವ ಕುರ್ಲೆಜಡ್ಡಿ ರಸ್ತೆ ಸುಮಾರು 5 ಕಿಮೀಯಷ್ಟು ಸಂಪೂರ್ಣ ರಾಡಿಯಿಂದ ಕೂಡಿದೆ. ಮಳೆಗಾಲದಲ್ಲಿ ವಾಹನಗಳನ್ನು ಚಲಾಯಿಸುವುದು ಬದಿಗಿರಲಿ, ನಡೆದು ಹೋಗುವುದೂ ಕಷ್ಟಸಾಧ್ಯ.
ಕುರ್ಲೆಜಡ್ಡಿ ಹಾಗೂ ಸುತ್ತಮುತ್ತಲಿನ 50 ಕ್ಕೂ ಹೆಚ್ಚು ಮಕ್ಕಳು ಶಾಲೆ-ಕಾಲೇಜಿಗೆ ಹೋಗಲು ಇದೇ ಮಾರ್ಗದಲ್ಲಿ ಬರಬೇಕು. ಗ್ರಾಮಸ್ಥರು ಪಡಿತರ, ಕಿರಾಣಿ ಹಾಗೂ ಇತರ ಯಾವುದೇ ಸಾಮಗ್ರಿಗಳು ಬೇಕಾದರೂ ಈ ದಾರಿಯ ಮೂಲಕವೇ ಮಾವಿನಕಟ್ಟಾಗೆ ಹೋಗಬೇಕು. ಯಾರಾದರೂ ಅನಾರೋಗ್ಯಕ್ಕೊಳಗಾದರೆ ಆಸ್ಪತ್ರೆಗೆ ಸಾಗಿಸುವುದು ತೀರಾ ಕಷ್ಟ. ರಾಡಿ ರಸ್ತೆಯಲ್ಲಿ ಕಂಬಳಿಯಲ್ಲಿ ಅವರನ್ನು ಕಟ್ಟಿಕೊಂಡೇ ಸಾಗಬೇಕು. ಬಾಡಿಗೆ ವಾಹನದವರು ಯಾರೂ ಈ ರಸ್ತೆಯಲ್ಲಿ ಬರಲು ಸಿದ್ಧರಾಗುವುದಿಲ್ಲ.
ಈ ಸಮಸ್ಯೆ ಪರಿಹರಿಸುವ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಚಿವರವರೆಗೂ ಗ್ರಾಮಸ್ಥರು ಮನವಿ ನೀಡಿದ್ದಾರೆ. ಗ್ರಾಮ ಪಂಚಾಯಿತಿಯವರು ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ ರಸ್ತೆಗೆ ಮಣ್ಣು ಹಾಕಿಕೊಡುವುದು ಬಿಟ್ಟರೆ ಬೇರಾವ ಪ್ರಯೋಜನವೂ ಇಲ್ಲ.
ಸೇತುವೆ ಕಾಮಗಾರಿ ಅರ್ಧಂಬರ್ಧ:
ಗ್ರಾಮದಲ್ಲಿನ ಹಳ್ಳಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಎರಡು ಸೇತುವೆ ಕಾಮಗಾರಿಗಳು ಅಪೂರ್ಣವಾಗಿದ್ದು ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಎರಡು ವರ್ಷಗಳಿಂದ ಕಾಮಗಾರಿ ನಿಂತಿದ್ದು, ಗ್ರಾಮಸ್ಥರು ಹಳ್ಳದಲ್ಲೇ ಓಡಾಡಬೇಕಾಗಿದೆ. ಜೋರಾಗಿ ಮಳೆ ಬಂದು ಹಳ್ಳ ಮೇಲಕ್ಕೆ ಬಂದರೆ ಯಾರೂ ಓಡಾಡುವ ಸ್ಥಿತಿ ಇಲ್ಲ. ಈ ಬಾರಿ ಹಳ್ಳ ಸೇತುವೆಯ ಮಟ್ಟಕ್ಕೆ ಬಂದು, ಮುಂದೆ ಹರಿಯಲಾಗದೇ ಪಕ್ಕದ ಕೃಷಿ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಉಂಟಾಗಿದೆ. ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೆ ಈ ರೀತಿ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಕುರ್ಲೆಜಡ್ಡಿ ರಸ್ತೆಗೆ ಗ್ರಾಮ ಪಂಚಾಯಿತಿಯಿಂದ ಮಣ್ಣು ಹಾಕಿಕೊಟ್ಟಿದ್ದೇವೆ. ಗ್ರಾ.ಪಂ ಮಟ್ಟದಲ್ಲಿ ಅದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಅವಕಾಶವಿರುವುದಿಲ್ಲ. ಜಿ.ಪಂ ಹಾಗೂ ಇತರ ದೊಡ್ಡ ಮೊತ್ತದ ಅನುದಾನದಿಂದ ಮಾತ್ರ ರಸ್ತೆ ಸಮರ್ಪಕವಾಗಿ ಮಾಡಲು ಸಾಧ್ಯ. ಗ್ರಾಮ ಪಂಚಾಯಿತಿಯಿಂದ ಜಿ.ಪಂಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು.
– ರವಿ ಪಟಗಾರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ
Leave a Comment