ಹೊನ್ನಾವರ: ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಉತ್ತರ ಕನ್ನಡ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಶರಾವತಿ ಸರ್ಕಲ್ ಬಳಿ ಗ್ಯಾಸ್ ಸಿಲೆಂಡರ್ ಹೊತ್ತು, ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಪಟ್ಟಣದ ಶರಾವತಿ ಸರ್ಕಲ್ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಸಾಮನ್ಯರಿಗೆ ಸಂಕಷ್ಟ ನೀಡುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಬೆಲೆ ಏರಿಕೆಯ ಬಿಸಿ ಕೊಡುತ್ತಿದೆ.
ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶರಾವತಿ ಸರ್ಕಲ್ ಬಳಿ ಗ್ಯಾಸ್ ಸಿಲೆಂಡರ್ ಇಟ್ಟು ಪ್ರತಿಭಟಿಸಿದ ಕಾರ್ಯಕರ್ತರು ಶರಾವತಿ ಸರ್ಕಲ್ನಿಂದ ಮಿನಿವಿಧಾನಸೌಧದ ವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಚುನಾವಣಾ ವಿಭಾಗದ ಶಿರಸ್ತೆದಾರ ಮಹೇಶ ನಾಯ್ಕ ಮನವಿ ಸ್ವೀಕರಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ್ ಮಾತನಾಡಿ, `ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಕೇಂದ್ರ ಹಾಗೂ ರಾಜ್ಯದಲ್ಲಿ ತಮ್ಮದೇ ಬಿಜೆಪಿ ಸರ್ಕಾರ ಬಂದರೆ ಕೈಗೆಟುಕುವ 50 ರೂ. ಕನಿಷ್ಟ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ನೀಡುತ್ತೇವೆ ಎಂದಿದ್ದರು. ಆದರೆ ಇಂದು ಅವೆಲ್ಲವೂ ಸುಳ್ಳಾಗಿದೆ. ಅಚ್ಚೇದಿನ ತರುತ್ತೆವೆ ಎಂದು ಕೊಚ್ಚೆ ದಿನ ತಂದಿದೆ.
ಇಂದು ಅದೆಷ್ಟೋ ಬೀದಿ ವ್ಯಾಪಾರಿಗಳು ಇಂದು ಬೀದಿಗೆ ಬಿದ್ದಿದ್ದಾರೆ. ಇನ್ನೊಂದೆಡೆ ಪ್ರಕೃತಿ ವಿಕೋಪ, ನೆರೆಹಾವಳಿಯಿಂದ ಮನೆ ಕಳೆದುಕೊಂಡು ಜನ ಕಂಗಾಲಾಗಿದ್ದು ಅವರಿಗೆ ಶೀಘ್ರವಾಗಿ ಪರಿಹಾರ ಕೊಡು ಕೆಲಸ ಮಾಡಬೇಕಿದೆ. ಜನ ಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಏಕಾಏಕಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜೀವನ ಮೂರಾಬಟ್ಟೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಜನರು ಉದ್ಯೋಗವಿಲ್ಲದೆ ಕಷ್ಟ ಪಡುತ್ತಿದ್ದಾರೆ. ಸರ್ಕಾರ ಕೂಡಲೆ ಬೆಲೆಗಳನ್ನು ಇಳಿಸಿ ಅನುಕೂಲ ಕಲ್ಪಿಸಬೇಕು.
ಮಹಿಳೆಯರಿಗಾಗಿ ಕಣ್ಣೀರನ್ನು ಹರಿಸುವ ಕೆಲಸವನ್ನು ಬಿಟ್ಟು ಕಣ್ಣಿರನ್ನು ಒರೆಸುವ ಕೆಲಸವನ್ನು ಮಾಡಿ. ಆದಷ್ಟು ಬೇಗ ಅಡುಗೆ ಅನಿಲದ ಹಾಗೂ ಇತರ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸಿ ಸಾರ್ವಜನಿಕರಿಗೆ ನೆಮ್ಮದಿ ಬದುಕನ್ನು ಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ದೇಶದಲ್ಲಿ ಮಹಿಳೆಯರ ಮೇಲಿನ ದೌಜನ್ಯ ಹಾಗೂ ಹಿಂಸಾಚಾರಗಳನ್ನು ತಡೆಗಟ್ಟಿ ಮಹಿಳೆಯರಿಗೆ ನೆಮ್ಮದಿಯ ಬದುಕುನ್ನು ಕಟ್ಟಿಕೊಡಬೇಕು. ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಜನಸಾಮಾನ್ಯರಿಗೆ ಅಚ್ಛೇದಿನ್ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಜೀವನದ ಮೇಲೆ ಬರೆ ಎಳೆಯುತ್ತಿದೆ.
ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಇಳಿಸುವ ಮೂಲಕ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ್, ಮಾಜಿ ಜಿಪಂ ಸದಸ್ಯರಾದ ಪುಷ್ಪಾ ನಾಯ್ಕ, ಸಿಂಧು ನಾಯ್ಕ, ಮಂಕಿ ಮಹಿಳಾ ಬ್ಲಾಕ್ ಅಧ್ಯಕ್ಷೆ ಉಷಾ ನಾಯ್ಕ, ಹೊನ್ನಾವರ ಮಹಿಳಾ ಬ್ಲಾಕ್ ಅಧ್ಯಕ್ಷೆ ಪುಷ್ಪಾ ಮಹೇಶ, ಭಟ್ಕಳ ಬ್ಲಾಕ್ ಅಧ್ಯಕ್ಷೆ ಜಯಲಕ್ಷ್ಮೀ ಗೊಂಡ, ಕುಮಟಾ ಬ್ಲಾಕ್ ಅಧ್ಯಕ್ಷೆ ಸುರೇಖಾ ವಾಲೇಕರ್, ಗೌರಿ ಅಂಬಿಗ, ಗೀತಾ ಭಂಡಾರ್ಕರ್, ಮಮತಾ ನಾಯ್ಕ, ವಿಜಯ ನಾಯ್ಕ, ವೀಣಾ ನಾಯ್ಕ ಇತರರು ಪಾಲ್ಗೊಂಡಿದ್ದರು.
Leave a Comment