ವೈದ್ಯಕೀಯ, ಸಹಕಾರಿ, ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಡಾ. ಎಂ.ಪಿ. ಕರ್ಕಿ ತಾಲೂಕಿಗೆ ಅನನ್ಯ ಸೇವೆ ಸಲ್ಲಿಸಿದ್ದರು. ಕಹಿಯಾದರೂ ಅಪ್ರಿಯ ಸತ್ಯವನ್ನು ಹೇಳುವ ನಿಷ್ಠೆ, ಕೈಬಾಯಿ ಶುದ್ಧತೆಗಳಿಗೆ ಹೆಸರಾದ ಡಾ. ಎಂ.ಪಿ. ಕರ್ಕಿ ವೈದ್ಯರಾಗಿ ಹಳ್ಳಿಹಳ್ಳಿ ತಿರುಗಿ ಅಗ್ಗದಲ್ಲಿ ಪ್ರಾಮಾಣಿಕ ವೈದ್ಯಕೀಯ ಸೇವೆ ನೀಡಿದ್ದರು.
ಸಮಾಜದ ರೋಗವನ್ನು ಕಂಡು ಚಿಕಿತ್ಸೆ ನೀಡಲು ಸಾಮಾಜಿಕ ಕ್ಷೇತ್ರಕ್ಕೆ ಬಂದರು, ಅಲ್ಲೂ ತನ್ನ ತನ ಉಳಿಸಿಕೊಂಡು ರಚನಾತ್ಮಕ ಕೆಲಸಗಳಿಂದ ತಾಲೂಕಿಗೆ ಶಾಶ್ವತ ಕೊಡುಗೆ ನೀಡಿದ್ದಾರೆ.
ಡಾ. ಎಂ.ಪಿ. ಕರ್ಕಿಯವರು ವಾಜಪೇಯಿಯವರೊಂದಿಗೆ
ಹೊನ್ನಾವರದ ಸುಪ್ರಸಿದ್ಧ ನ್ಯಾಯವಾದಿ, ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರ ಗಣೇಶ ಕರ್ಕಿ ಹಾಗೂ ಶ್ರೀಮತಿ ಅನಸೂಯಾ ಕರ್ಕಿ ಅವರ ಮಗನಾಗಿ ದಿನಾಂಕ 16-7-1935 ರಂದು ಜನಿಸಿದ ಇವರು ಮುಂಬೈನಲ್ಲಿ 1959ರಲ್ಲಿ ಪ್ರಸಿದ್ಧ ಗ್ರ್ಯಾಂಟ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಗಳಿಸಿ ಆ ಕಾಲದಲ್ಲಿ ತಾಯ್ನೆಲದ ಜನರ ಸೇವೆಗಾಗಿಯೇ ಹೊನ್ನಾವರದಲ್ಲಿ ವೈದ್ಯಕೀಯ ಸೇವೆ ಆರಂಭಿಸಿ ಎರಡು ದಶಕಗಳಿಗೂ ಹೆಚ್ಚುಕಾಲ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಹಣ ಇರಲಿ, ಇಲ್ಲದಿರಲಿ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಔಷಧ ಕೊಡದೆ ಕಳಿಸುತ್ತಿರಲಿಲ್ಲ. ಹಗಲು-ರಾತ್ರಿಯೆನ್ನದೆ ಹಳ್ಳಿಹಳ್ಳಿಗೆ ತಿರುಗಿ ವೈದ್ಯಕೀಯ ಸೇವೆ ನೀಡಿದ್ದನ್ನು ಜನ ಎಂದಿಗೂ ಮರೆಯಲಾರರು.

ಸೇವೆ ಮಾಡಲೆಂದೇ ಬಿಜೆಪಿ ಪಕ್ಷ ಸೇರಿಕೊಂಡ ಡಾ. ಕರ್ಕಿ ವಾಜಪೇಯಿಯವರಿಂದ ಪ್ರಭಾವಿತರಾಗಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿದ ಪ್ರಥಮರಲ್ಲಿ ಒಬ್ಬರು. ಪಕ್ಷದ ಸಂಘಟಕರಾಗಿ, ಜಿಲ್ಲಾಧ್ಯಕ್ಷರಾಗಿ ಕೆಲಸಮಾಡಿ ಚುನಾವಣೆಗೆ ನಿಂತು, ಸೋತು, ನಂತರ ಪುನಃ ಗೆದ್ದು 1983 ಹಾಗೂ 1994ರಲ್ಲಿ ಎರಡು ಅವಧಿಗೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಕುಂದುಕೊರತೆಗಳಿಗೆ ಪ್ರಾಮಾಣಿಕವಾಗಿ ಡಾ. ಕರ್ಕಿ ಸ್ಪಂದಿಸಿದ್ದಾರೆ. ತಮ್ಮ ಶಾಸಕತ್ವದ ಅವಧಿಯಲ್ಲಿ ಲಂಚ ಪಡೆಯುವ, ಕೊಡುವ, ಕೊಡಿಸುವ ಯಾವುದನ್ನೂ ಮಾಡದ ಡಾ. ಕರ್ಕಿಯವರ ಪ್ರಾಮಾಣಿಕತೆ ವಿಧಾನಸೌಧದಲ್ಲಿ ನಿತ್ಯದ ಮಾತಾಗಿತ್ತು. ಹೊನ್ನಾವರ-ಕುಮಟಾ ಪಟ್ಟಣಗಳಿಗೆ ನೀರು ಪೂರೈಸುವ ಮರಾಕಲ್ ಯೋಜನೆ ಇವರ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿದೆ.
ಹೊನ್ನಾವರ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿದ್ದರು. ತಾಲೂಕಾ ಬೋರ್ಡಿನ ಸದಸ್ಯರಾಗಿ, ಲ್ಯಾಂಡ್ ಬ್ಯಾಂಕಿನ ಅಧ್ಯಕ್ಷರಾಗಿ, ಭಾರತ್ ಮಜದೂರ್ ಸಂಘದ ಸಂಚಾಲಕರಾಗಿ, ಹವ್ಯಕ ಬ್ಯಾಂಕಿನ ಅಧ್ಯಕ್ಷರಾಗಿ ದುಡಿದಿದ್ದಾರೆ. ಹವ್ಯಕ ಸಭಾಭವನದ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಅದನ್ನು ಎಲ್ಲರೂ ಹೆಮ್ಮೆಪಡುವಂತೆ ನಿರ್ಮಿಸಿ ಎಲ್ಲ ಸಮುದಾಯದವರಿಗೆ ಅರ್ಪಿಸಿದ್ದಾರೆ.
ಮೂಡಗಣಪತಿ ದೇವಾಲಯದ ಮುಖ್ಯ ಟ್ರಸ್ಟಿಯಾಗಿ, ಲಯನ್ಸಕ್ಲಬ್ನ ಅಧ್ಯಕ್ಷರಾಗಿ, ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾಗಿ ಮೂರು ದಶಕಗಳಿಗೂ ಹೆಚ್ಚುಕಾಲ ಕಳಂಕರಹಿತ ಸೇವೆ ಸಲ್ಲಿಸಿದ್ದು ಭೌತಿಕವಾಗಿ ಕಾಲೇಜನ್ನು ವಿಸ್ತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜಿಲ್ಲಾ ಅನುದಾನಿತ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾಗಿ, ಕಾಸರಕೋಡಿನ ಕೋ-ಆಪರೇಟಿವ್ ಹಂಚಿನ ಕಾರ್ಖಾನೆಯ ಅಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ‘ಸಿಂಡಿಕೇಟ್’ನ ಸದಸ್ಯರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದಾರೆ.
AD
shri devaki krishna wash point karki naka honavar contact; sachin mesta 9538529046,8310014860
ಮನೆಯಲ್ಲಿಯೂ ಶಿಸ್ತು, ಅಚ್ಚುಕಟ್ಟುತನ, ಶುಚಿರುಚಿಯಾದ ಆತಿಥ್ಯಕ್ಕೆ ಹೆಸರಾಗಿದ್ದ ಡಾ. ಕರ್ಕಿಯವರು ಮತ್ತು ಪತ್ನಿ ಲಕ್ಷ್ಮೀಬಾಯಿ ಇವರ ಆತಿಥ್ಯವನ್ನು ಬಿಜೆಪಿಯ ಸಣ್ಣ-ದೊಡ್ಡ ಮುಖಂಡರಿಂದ ಆರಂಭಿಸಿ ಅಟಲ್ ಬಿಹಾರಿ ವಾಜಪೇಯಿಯವರವರೆಗೆ ಸಾವಿರಾರು ಜನ ಸವಿದಿದ್ದಾರೆ. ಮಗ ರವಿ, ಮಗಳು ಕಾಂಚನಾ, ಮೊಮ್ಮಕ್ಕಳೊಂದಿಗೆ ಕೌಟುಂಬಿಕವಾಗಿ ನೆಮ್ಮದಿಯ ಜೀವನ ಕಂಡಿದ್ದಾರೆ. ತಾಲೂಕಿನಲ್ಲಿ ಅಪರೂಪಕ್ಕೆ ಇಂತಹ ಪ್ರಾಮಾಣಿಕ ವ್ಯಕ್ತಿಗಳು ಕಾಣಿಸಿಕೊಂಡು ತಮ್ಮ ಅವಧಿಯಲ್ಲಿ ತಾಲೂಕನ್ನು ಅಭಿವೃದ್ಧಿಪಡಿಸಿದ್ದಾರೆ. ಅವರಲ್ಲಿ ಡಾ. ಎಂ.ಪಿ. ಕರ್ಕಿ ಅಗ್ರಗಣ್ಯರು
Leave a Comment