ಯಲ್ಲಾಪುರ;
ಪುರಾಣ ಕಥೆಗಳ ಶೃವಣ ಮಾಡುವುದರಿಂದ ದೇವತಾರಾಧನೆ,ಜತೆಗೆ ಜ್ಞಾನಾರ್ಜನೆ ಉಂಟಾಗಲು ಸಾಧ್ಯ ಎಂದು ವೆ.ಜಿ.ವಿ.ಭಟ್ಟ ಬಾಸಲ್ ಹೇಳಿದರು.
ಅವರು ತಾಲೂಕಿನ ತೇಲಂಗಾರದಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಹಾಗೂ ಗೋಪಾಲಕೃಷ್ಣ ಯಕ್ಷಗಾನ ಬಳಗ ಇವರು ಹಮ್ಮಿಕೊಂಡಿದ್ದ ಯಕ್ಷರಾತ್ರಿ ೫ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಪತ್ರಕರ್ತ ಸುಬ್ರಾಯ ಬಿದ್ರೆಮನೆ ಮಾತನಾಡಿ,ಉಳಿದೆಲ್ಲ ಕಲೆಗಳಲ್ಲಿ ಕನ್ನಡದ ಕಲಬೆರಕೆ ಹೆಚ್ಚುತ್ತ,ಕರ್ನಾಟಕದಲ್ಲೇ ಕನ್ನಡ ಕಳೆದು ಹೋಗುವ ಅಪಾಯವಿದೆ.ಇಂತಹ ಸಂದರ್ಭದಲ್ಲಿ ಯಕ್ಷಗಾನ ಕಲೆಯಲ್ಲಿ ಮಾತ್ರ ಶುದ್ದ ಕನ್ನಡದ ಪೋಷಣೆಯಾಗುತ್ತಿದೆ.ಕೊರೊನಾ ಹೊಡೆತದಿಂದ ಕಲಾ ಕ್ಷೇತ್ರ ನಿಂತ ನೀರಾಗಿದ್ದು,ಈಗ ನಿಧಾನವಾಗಿ ಚೇತರಿಸಿ ಕೊಳ್ಳುತ್ತಿರುವುದು ಸಮಾಧಾನಕರ ಎಂದರು.
ಅಧ್ಯಕ್ಷತೆ ವಹಿಸಿದ್ದ ವೆ.ಗೋಪಾಲ ಭಟ್ಟ ಮುಂಡ್ಗೆತಗ್ಗು ಮಾತನಾಡಿ,ಅನೀತಿಯನ್ನು ಅನುಸರಿಸಿದರೆ,ಅಧೋಗತಿ ಹೊಂದುತ್ತೇವೆ.ನೀತಿಯಿಂದ ನಡೆದರೆ ಮಾತ್ರ
ಶ್ರೇಯಸ್ಸು ಹೊಂದಲು ಸಾಧ್ಯ ಎನ್ನುವುದಕ್ಕೆ ಪುರಾಣ ಕಥೆಗಳು ನಿದರ್ಶನವಾಗಿವೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಗಣಪತಿ ಕಂಚಿಪಾಲ ಹಾಗೂ ಶಿವರಾಮ ಗಾಂವ್ಕಾರ ಬೀಗಾರ,ಅಕ್ಷರ ದಾಸೋಹದ ಮಾಜಿ ಅಡಿಗೆಯವರಾದ ಯಮುನಾ ಭಟ್ಟ,ಆಶಾ ಕಾರ್ಯಕರ್ತೆ ಸುಮಂಗಲಾ ನಾಯ್ಕ ಸನ್ಮಾನಿಸಲಾಯಿತು.
ಸಂಘಟಕರಾದ ಎಂ.ಆರ್.ಭಟ್ಟ ತೇಲಂಗಾರ,ಮಂಜುನಾಥ ಕಲ್ಮನೆ,ಹರಿ ಬಾಂದೇಕರ ಇದ್ದರು.
ಶಿಕ್ಷಕರಾದ ವಿ.ಕೆ.ಗಾಂವ್ಕಾರ ಸ್ವಾಗತಿಸಿದರು.ವಿ.ಎಸ್.ಭಟ್ಟ ಅಬ್ಬಿತೋಟ ನಿರೂಪಿಸಿ ವಂದಿಸಿದರು.
ರಂಜಿಸಿದ ಕರ್ಣ ಪರ್ವ
ನಂತರ ನಡೆದ ತಾಳಮದ್ದಲೆಯ ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ದಂತಳಗಿ,ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ,ಚಂಡೆವಾದಕರಾಗಿ ಗಣೇಶ ಗಾಂವ್ಕಾರ ಕನಕನಹಳ್ಳಿ ಕಾರ್ಯನಿರ್ವಹಿಸಿದರು.ಕರ್ಣಪರ್ವದಲ್ಲಿ ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ,ಪವನ ಕಿರಣಕೆರೆ,ವಾಸುದೇವ ರಂಗ ಭಟ್ಟ,ಗಣಪತಿ ಭಟ್ಟ ಸಂಕದಗುಂಡಿ,ಶಿವರಾಮ ಭಾಗ್ವತ್ ವಿವಿಧ ಪಾತ್ರಚಿತ್ರಿಸಿ,ಪ್ರೇಕ್ಷಕರನ್ನು ರಂಜಿಸಿದರು.
Leave a Comment