
ಯಲ್ಲಾಪುರ : ಅಜಾಗರೂಕತೆಯಿಂದ ವೇಗವಾಗಿ ಕಾರನ್ನು ಓಡಿಸಿಕೊಂಡು ಬಂದು ಬಸ್ಗೆ ಗುದ್ದಿದಂತಹ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಆರತಿಬೈಲ್ ಸಮೀಪ ಸೋಮವಾರ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಅತಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದ ಆರೋಪಿ ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಫಾರೂಕ್ ಅಹಮ್ಮದ್, ಅಂಕೋಲಾ ಕಡೆಯಿಂದ ಬರುತ್ತಿದ್ದ ಕಾರವಾರ-ಹುಬ್ಬಳ್ಳಿ ಬಸ್ಗೆ ಮುಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದಿದೆ. ರಸ್ತೆ ಬದಿಯಲ್ಲಿದ್ದ ಜಾಹಿರಾತುಫಲಕಕ್ಕೆ ಬಸ್ ವಾಲಿ ನಿಂತ ಕಾರಣ ಸಂಪೂರ್ಣವಾಗಿ ಮಗುಚಿ ಬೀಳದೆ ಭಾರೀ ಅನಾಹುತದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ ಚಾಲಕ ಎನ್.ಬಿ. ಹುಚ್ಚನೂರ್ ಸೇರಿದಂತೆ ಅಂಕೋಲಾ ಡಿಪೋದ ನಿರ್ವಾಹಕ ಶ್ರೀಧರ ನಾರಾಯಣ ಮರಾಠೆ (52), ಪ್ರಯಾಣಿಕರಾದ ಯಲ್ಲಾಪುರದ ವಜ್ರಳ್ಳಿಯ ಸುಧಾ ಕೃಷ್ಣಾ ಸಿದ್ದಿ (38), ಬಾಗಲಕೋಟೆಯ ನವನಗರದ ಬಿಬಿಜಾನ್ ಮೆಹಬೂಬಸಾಬ್ ಹಳ್ಳಿ (45), ಮಹಮ್ಮದ್ ಸಿದ್ದಿಕ್ ಪೆಂಡಾರಿ (24), ಉಮ್ಮರ ಮೆಹಬೂಬಸಾಬ್ ಹಳ್ಳಿ (15) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ.
Leave a Comment