

ಯಲ್ಲಾಪುರ: ಅರಣ್ಯವಾಸಿಗಳ ಸಮಸ್ಯೆ ಯಾದ ಅರಣ್ಯ ಹಕ್ಕು ಹಾಗೂ ತಟ್ಟಿಹಳ್ಳ ಡ್ಯಾಂಮೇಲ್ಬಾಗದ ಭೀಮನಹಳ್ಳಿಯಲ್ಲಿ ದನಗರ ಗೌಳಿಗರ ಜಮೀನುಗಳನ್ನು ಅರಣ್ಯ ಇಲಾಖೆಯಿಂದ ಖುಲ್ಲಾ ಪಡಿಸುತ್ತಿರುವ ಬಗ್ಗೆ ಮತ್ತು ಉ.ಕ.ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅರಣ್ಯ ಇಲಾಖೆ ಸಹಕಾರ ನೀಡುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವುದಾಗಿ ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಭರವಸೆ ನೀಡಿದರು.
ಖಾಸಗಿ ಕಾರ್ಯ ನಿಮಿತ್ತ ಯಲ್ಲಾಪುರಕ್ಕೆ ಆಗಮಿಸಿದ್ದ ಸಚಿವರನ್ನು ಪಟ್ಟಣದ ಅರಣ್ಯ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ ಹಾಗೂ ವನವಾಸಿ ಕಲ್ಯಾಣದ ದೋಂಡು ಪಾಟೀಲ ಭೇಟಿಯಾಗಿ ಅರಣ್ಯವಾಸಿಗಳಿಗೆ ಆಗುತ್ತಿರುವ ತೊಂದರೆ ವಿವರಿಸಿದಾಗ ಸಚಿವರು ಈ ಭರವಸೆ ನೀಡಿದರು.
ಅರಣ್ಯವಾಸಿಗಳು ಹಾಗೂ ಬುಡಕಟ್ಟು ಜನಾಂಗದವರು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿದ್ದವರಲ್ಲಿ ಅತಿ ಕಡಿಮೆ ಜನರಿಗೆ ಅರಣ್ಯ ಹಕ್ಕು ಪತ್ರ ದೊರೆತಿದೆ. ಹೀಗಾದರೆ ಉಳಿದವರ ಗತಿಯೇನು ಎಂದು ಶಾಂತಾರಾಮ ಸಿದ್ಧಿ ಮತ್ತು ಜೊತೆಗಾರರು ಅಸಹಾಯಕತೆ ವ್ಯಕ್ತಪಡಿಸಿದಾಗ ಸಚಿವರು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದರು .
ಹಾಗೆಯೇ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕುರಿತು ಪ್ರತಿಕ್ರಿಯಿಸಿದ ಸಚಿವರು ಈಗಾಗಲೇ ಅರಣ್ಯ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದೀಗ ಹೈಕೋರ್ಟ್, ವನ್ಯಜೀವಿ ಮಂಡಳಿಯಿಂದ ಸಾಧಕ ಬಾಧಕದ ವರದಿ ಕೇಳಿರುವುದು ಪರಿಸರವಾದಿಗಳಿಗೆ ಹಿನ್ನಡೆಯಾಗಿದೆ. ಮಂಡಳಿಯು ಯೋಜನೆಗೆ ಪೂರಕ ವರದಿಯನ್ನು ನೀಡಲಿದೆ ಎಂಬ ವಿಶ್ವಾಸ ಸರ್ಕಾರಕ್ಕಿದೆ. ಅದಕ್ಕೆ ಬೇಕಾದ ಅಗತ್ಯ ಮಾಹಿತಿಗಳನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.ಈ ಸಂದರ್ಭ ದಲ್ಲಿ
ವನವಾಸಿ ಕಲ್ಯಾಣ ರಾಜ್ಯ ಹಿತರಕ್ಷಾ ಪ್ರಮುಖರಾದ ದೊಂಡು ಪಾಟೀಲ,ಬಿಜ್ಜು ಪಿಂಗಳೆ, ಲಕ್ಶ್ಮಣ ತೋರಥ್, ಕೆನರಾ ವಲಯ ಅರಣ್ಯಧಿಕಾರಿ ಡಿ ಯತೀಶಕುಮಾರ,ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಕೃಷ್ಣ ಹೆಗಡೆ ಮುಂತಾದವರು ಇದ್ದರು.
Leave a Comment