
ಯಲ್ಲಾಪುರ : ಪಟ್ಟಣದ ಪೊಲೀಸ ಠಾಣೆಯಲ್ಲಿ ಅಪರಾಧ ತಡೆ ಮಾಸಾಚಾರಣೆ ನಿಮಿತ್ತ ಸಿ.ಪಿ.ಐ. ಸುರೇಶ ಯಳ್ಳೂರ್ ಅವರ ನೇತೃತ್ವದಲ್ಲಿ ಯಲ್ಲಾಪುರ ತಾಲ್ಲೂಕಿನ ಎಲ್ಲ ವೆಲ್ಡಿಂಗ್ ಶಾಪ್ ಹಾಗೂ ಗ್ಯಾರೇಜ ಮೆಕ್ಯಾನಿಕ್ಸ್, ಮಾಲೀಕರ ಸಭೆ ಕರೆದು ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಕೆಲಸಗಾರರಿಗೆ ಹಾಗೂ ಮಾಲಿಕರಿಗೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ವಾಹನಗಳನ್ನು ನಿಲ್ಲಿಸಿ ರಿಪೇರಿ ಕೆಲಸ ಮಾಡಬಾರದು, ಎಲ್ಲ ಗ್ಯಾರೇಜುಗಳಿಗೆ ವ್ಯವಸ್ಥಿತ ರೀತಿಯಲ್ಲಿ ಉತ್ತಮ ಕಂಪನಿಯ CCTV ಕ್ಯಾಮೆರಾ ಅಳವಡಿಕೆ, ಅಪಘಾತವಾದ ವಾಹನಗಳು ರಿಪೇರಿಗೆ, ಪೇಂಟಿಂಗ್ ಗೆ ಬಂದಾಗ ಅದರ ಬಗ್ಗೆ ಸಂಪೂರ್ಣ ವಿಚಾರ ತಿಳಿದುಕೊಂಡು ರಿಪೇರಿ ಮಾಡಿಕೊಡುವುದು ಹಾಗೂ ಈ ಬಗ್ಗೆ ಪೊಲೀಸ ಠಾಣೆಗೆ ವಿಚಾರ ತಿಳಿಸುವುದು, ರಾಷ್ಟ್ರೀಯ ಹೆದ್ದಾರಿಯಲ್ಲಿ, ಅರಬೈಲ್ ಘಟ್ಟ, ಆರತಿ ಬೈಲ್ ಘಟ್ಟಗಳಲ್ಲಿ ವಾಹನಗಳು ಹಾಳಾಗಿ ನಿಂತಾಗ ಮೊದಲು ಆ ವಾಹನವನ್ನು ರಸ್ತೆ ಬಿಟ್ಟು ಸುರಕ್ಷಿತವಾದ ಸ್ಥಳಗಳಲ್ಲಿ ನಿಲ್ಲಿಸಿ ನಂತರ ರಿಪೇರಿ ಮಾಡುವುದು. ಅದರ ಜೊತೆಗೆ ಹೆದ್ದಾರಿಯಲ್ಲಿ ಇನ್ನುಳಿದ ವಾಹನಗಳ ಓಡಾಟಕ್ಕೆ ಅಡಚಣೆ ಆಗದಂತೆ ನೋಡಿಕೊಳ್ಳುವುದು, ಹೊರಗಡೆಯಿಂದ ಬಂದ ವಾಹನಗಳನ್ನು ರಿಪೇರಿ ಮಾಡಿಕೊಂಡು ಹೋದವರ ದಾಖಲಾತಿಗಳನ್ನು ಇಟ್ಟುಕೊಳ್ಳುವುದು ಹಾಗೂ ರಿಜಿಸ್ಟರ್ ನಿರ್ವಹಿಸುವುದು, ರಾತ್ರಿ ವೇಳೆಯಲ್ಲಿ ಯಾವುದೇ ಸಂಶಯಾಸ್ಪದ ವಾಹನಗಳು ಕಂಡುಬಂದರೆ ಕೂಡಲೇ ಠಾಣೆಗೆ ಮಾಹಿತಿ ನೀಡಲು ತಿಳಿಸಲಾಯಿತು.
ವ್ಯವಹಾರದ ಸಮಯದಲ್ಲಿ ಫೋನ್ ಪೇ/ಗೂಗಲ್ ಪೇ ಬಳಸುವಾಗ ಎಚ್ಚರಿಕೆ ವಹಿಸಲು, ಕಳ್ಳತನದ ವಾಹನ ಅಥವಾ ಯಾವುದೇ ಅಪರಾಧ ಕೃತ್ಯದಲ್ಲಿ ಉಪಯೋಗ ವಾಗಿರುವ ವಾಹನದ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಠಾಣೆಗೆ ಅಥವಾ ಅಪರಾಧ ವಿಭಾಗದ ಸಿಬ್ಬಂದಿಗೆ ತಿಳಿಸಲು ಸೂಚಿಸಲಾಯಿತು.
ಈ ಸಭೆಯಲ್ಲಿ ಏಎಸ್ಐ ಆನಂದ ಪಾವಸ್ಕರ ಮತ್ತು ಸಿಬ್ಬಂದಿಗಳಾದ ಗಜಾನನ ನಾಯ್ಕ, ಶಫೀ ಶೇಖ, ಅಮರ, ಶೋಭಾ ನಾಯ್ಕ ಹಾಗೂ ತಾಲ್ಲೂಕಿನ ಎಲ್ಲ ಗ್ಯಾರೇಜ್ ಮೆಕ್ಯಾನಿಕ, ವೆಲ್ಡಿಂಗ್ ಶಾಪ್ ಮಾಲೀಕರು ಇದ್ದರು.
Leave a Comment