ಯಲ್ಲಾಪುರ : ಯಲ್ಲಾಪುರ ಬಸ್‌ಸ್ಟ್ಯಾಂಡ್‌ನಲ್ಲಿ ಪಿಕ್‌ಪಾಕೆಟ್ ಮಾಡಿ 30 ಸಾವಿರ ರೂ.ಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯ ಸೆಟ್ಲಮೆಂಟ್ ಏರಿಯಾದ ಅಶೋಕ ಹನುಮಂತಪ್ಪ ತಿಗಡಿ ಅಲಿಯಾಸ್ ಆಸ್ಯಾ, ಅನೀಲ್ ದಿಲೀಪ್ ಕಂಜರಬಾದ್ ಅಲಿಯಾಸ್ ಗಂಗ್ಯಾ, ಶೇಖಪ್ಪ ಬಸಪ್ಪ ಗುಳಗಣ್ಣನವರ ಬಂಧಿತ ಆರೋಪಿಗಳಾಗಿದ್ದು, ಡಿ.17 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ತಾಲೂಕಿನ ಹುಣಶೆಟ್ಟಕೊಪ್ಪದ ನಿವೃತ್ತ ಶಿಕ್ಷಕ ದೇವೆಂದ್ರ ದೇಮಣ್ಣಾ ಗುಂಡುಪಕರ್(80) ಇವರು ಯಲ್ಲಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಳಿಯಾಳಕ್ಕೆ ಹೋಗಲು ಶಿರಸಿ-ಬೆಳಗಾಂವ ಬಸ್ ಹತ್ತುವಾಗ ತಮ್ಮ ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗಿನ ಕೆಳಭಾಗವನ್ನು ಹರಿತವಾದ ವಸ್ತುವಿನಿಂದ ಕತ್ತರಿಸಿ ಬ್ಯಾಗನಲ್ಲಿದ್ದ 30,000/- ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.

ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನತ್ತಿದ ಯಲ್ಲಾಪುರ ಪೊಲೀಸರು, ಹುಬ್ಬಳ್ಳಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಕಳ್ಳತನ ಮಾಡಿದ ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಮಾಂಜ್ ಕಾರು ಜಪ್ತು ಪಡಿಸಿಕೊಳ್ಳಲಾಗಿದೆ. ಇನ್ನು ಇಬ್ಬರು ಆರೋಪಿತರು ತಲೆ ಮರೆಸಿಕೊಂಡಿದ್ದು, ತನಿಖೆ ನಡೆಸಲಾಗಿದೆ. ಬಂಧಿತ ಆರೋಪಿತರು ಅಂತರ್ ಜಿಲ್ಲಾ ಕಳ್ಳರಾಗಿದ್ದು, ಈ ಹಿಂದೆ ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸಿಪಿಐ ಸುರೇಶ ಯಳ್ಳೂರ, ಪಿ.ಎಸ್.ಐ ಪ್ರಿಯಾಂಕಾ ನ್ಯಾಮಗೌಡ ಇವರ ನೇತ್ರತ್ವದಲ್ಲಿ ಸಿಬ್ಬಂದಿಯವರಾದ ಬಸವರಾಜ ಹಗರಿ, ಮಹಮ್ಮದ್ ಶಫೀ ಶೇಖ್, ಗಜಾನನ ನಾಯ್ಕ, ವಿನೋದಕುಮಾರ, ಬಸವರಾಜ ಡಿ.ಕೆ, ಹಾಗೂ ಶೋಭಾ ನಾಯ್ಕ ಇವರು ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Leave a Comment