ಭಟ್ಕಳ: ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ ಬೆಳ್ನಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಯನ್ನು ಸಾರ್ವಜನಿಕರು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಘಟಕ ನಿರ್ಮಾಣಕ್ಕೆ ಗುರುತು ಹಾಕಲು ಬಂದ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿಗಳನ್ನು, ಭಟ್ಕಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠ್ಠಲ್ ನಾಯ್ಕ ನೇತೃತ್ವದಲ್ಲಿ ತಡೆದ ಸಾರ್ವಜನಿಕರು, ಇದು ಜನವಸತಿ ಪ್ರದೇಶವಾಗಿದೆ. ಸದರಿ ನಿವೇಶನಕ್ಕೆ ಹೊಂದಿಕೊಂಡೇ ರಾಜ್ಯ ಹೆದ್ದಾರಿ ಇದೆ. ಘನತ್ಯಾಜ್ಯ ವಿಲೇವಾರಿ ಘಟಕದಿಂದ ಪರಿಸರ, ಜನರ ಆರೋಗ್ಯ ಹದಗೆಡಲಿದೆ, ಇಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದಕ್ಕೆ ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಜನರ ಆರೋಪವನ್ನು ಅಲ್ಲಗಳೆದ ಪಂಚಾಯತ ಅಧ್ಯಕ್ಷೆ ಸುಮಿತ್ರಾ ಗೊಂಡ, ಉಪಾಧ್ಯಕ್ಷ ದಾಸ ನಾಯ್ಕ, ಪಂಚಾಯತ ಅಭಿವೃದ್ಧಿ ಅಧಿಕಾರಿ ಜಯಂತಿ ನಾಯ್ಕ, ಜನರಿಗೆ ಅರಿವಿನ ಕೊರತೆ ಇದೆ, ಜಿಲ್ಲೆಯ ಬೇರೆ ಸ್ಥಳಗಳಲ್ಲಿ ಜನವಸತಿ ಪ್ರದೇಶದಲ್ಲಿಯೇ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದೆ, ಇಲ್ಲಿ ಒಣ ತ್ಯಾಜ್ಯವನ್ನಷ್ಟೇ ಸಂಗ್ರಹಿಸಿ ನಂತರ ವಿಲೇವಾರಿ ಮಾಡಲಾಗುತ್ತಿದ್ದು, ಇದರಿಂದ ಪರಿಸರಕ್ಕೆ, ಜನರಿಗೆ ಯಾವುದೇ ಹಾನಿಯಾಗುವುದಿಲ್ಲ.
ಭಟ್ಕಳ ಸಹಾಯಕ ಆಯುಕ್ತರಾಗಲಿ, ತಾಪಂ ಕಾರ್ಯನಿರ್ವಹಣಾಧಿಕಾರಿಗಳಾಗಲಿ ಲಿಖಿತವಾಗಿ ಕೆಲಸವನ್ನು ನಿಲ್ಲಿಸುವಂತೆ ತಿಳಿಸಿದರೆ ಮಾತ್ರ ಕಾಮಗಾರಿ ಸ್ಥಗಿತಗೊಳಿಸುತ್ತೇವೆ. ನಾವು ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ನಡೆಸಲು ಬದ್ಧರಾಗಿದ್ದೇವೆ ಎಂದು ತಿರುಗೇಟು ನೀಡಿದರು. ಇದನ್ನು ಒಪ್ಪದ ಪ್ರತಿಭಟನಾಕಾರರು, ನೀವು ಹೆಸರಿಗೆ ಒಣ ತ್ಯಾಜ್ಯ ಎನ್ನುತ್ತೀರಿ, ಆದರೆ ಜನರು ಹಸಿ ತ್ಯಾಜ್ಯವನ್ನು ನೀಡುತ್ತಾರೆ ಅಥವಾ ಈ ಜಾಗದಲ್ಲಿ ಎಸೆದು ಹೋಗುತ್ತಾರೆ, ದಿನ ಕಳೆದಂತೆ ಹೊಸ ಸಮಸ್ಯೆ ಸೃಷ್ಟಿಯಾಗುತ್ತ ಹೋಗುತ್ತದೆ. ನೀವು ಕಾಮಗಾರಿಯ ಬಿಲ್ ಪಾವತಿಸಿ ಮನೆಯಲ್ಲಿ ಇರುತ್ತೀರಿ, ತೊಂದರೆ ಅನುಭವಿಸುವವರು ಜನರು ಎಂದು ಅಸಮಾಧಾನ ಹೊರ ಹಾಕಿದರು. ಪರ, ವಿರೋಧದ ಹೇಳಿಕೆಗಳಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಕಾಮಗಾರಿ ಸ್ಥಗಿತಗೊಳಿಸಲು ಪಂಚಾಯತ ಆಡಳಿತ ಒಪ್ಪದ ಕಾರಣ ಸಹಾಯಕ ಆಯುಕ್ತರ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಸಹಾಯಕ ಆಯುಕ್ತರು, ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಅಲ್ಲಿನ ಸಿಬ್ಬಂದಿಗಳ ಮುಂದೆ ಅಹವಾಲು ಮಂಡಿಸಿದರು. ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು, ಇಲ್ಲದಿದ್ದರೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ತಿಳಿಸಿ ಅಲ್ಲಿಂದ ತೆರಳಿದರು.
Leave a Comment