ಸಿಂಧನೂರು: ಮಕರ ಸಂಕ್ರಾಂತಿ ಹಬ್ಬವನ್ನು ತಾಲೂಕಿನಾದ್ಯಂತ ಶುಕ್ರವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ನಾನಾ ಕಡೆಗಳಲ್ಲಿ ಬೆಳಗ್ಗೆಯೇ ರಂಗೋಲಿ ಚಿತ್ತಾರ ಬಿಡಿಸಿ, ಒಂದೆಡೆ ಸೇರಿ ಸೂರ್ಯ ನಮಸ್ಕಾರ ಮಾಡಿದರು. ಕೆಲವೆಡೆ ಕಾಲೊನಿ ಜನರೆಲ್ಲ ಒಂದೆಡೆ ಸೇರಿ ಬೆಂಕಿ ಕಾಯಿಸಿ ( ಬೋಗಿ) ಹಬ್ಬವನ್ನು ಆಚರಿಸಲಾಯಿತು.


ಸಂಪ್ರದಾಯಿಕ ಮೆರುಗು:
ಶ್ರೀಕೃಷ್ಷದೇವರಾಯ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ- ಆಂಧ್ರದ ಆಚರಣಾ ಪದ್ಧತಿಯನ್ನು ಒಗ್ಗೂಡಿಸಿ ಆಚರಿಸುವ ಮೂಲಕ ಪೊಂಗಲ್ ಮಾಡಿ, ಸವಿಯಲಾಯಿತು.
ಗುಡಿಸಲು ನಿರ್ಮಿಸಿ, ಅದನ್ನು ಸಿಂಗರಿಸಿ ಸುಗ್ಗಿಯಲ್ಲಿ ರಾಶಿ ಮಾಡಿ, ದಾನ ಮಾಡುವ ಪದ್ಧತಿಯನ್ನು ಪರಿಚಯಿಸಲಾಯಿತು. ಎತ್ತಿನ ಬಂಡಿಯನ್ನು ಮಹಿಳೆಯರೇ ಎಳೆದು ಸಂಭ್ರಮಿಸಿದರೆ, ಪುಟ್ಟ ದಾನ ಸ್ವೀಕರಿಸುವ ಮೂಲಕ ಮಂಗಳಕರ ಹಬ್ಬದಂದು ದಾನದ ಮಹತ್ವ ಸಾರಲಾಯಿತು. ಮಹಿಳೆಯರು ಸಂಕ್ರಾತಿ ಹಾಡುಗಳಿಗೆ ಹೆಜ್ಜೆ ಹಾಕಿದರು. ಹಗ್ಗ ಜಗ್ಗಾಟ, ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಸುಗ್ಗಿಯ ಕಾಲದಲ್ಲಿ ಬರುವ ಸಂಕ್ರಾಂತಿ ಆಚರಣೆಯ ಮಹತ್ವ ಸಾರುವುದರ ಜೊತೆಗೆ ಮಕ್ಕಳಿಗೆ ಸಂಪ್ರದಾಯಿಕ ಆಚರಣೆಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ನಾನಾ ಕಡೆಗಳಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಈ ಬಗ್ಗೆ ಶ್ರೀಕೃಷ್ಷದೇವರಾಯ ಸಂಸ್ಥೆ ಆಡಳಿತಾಧಿಕಾರಿ ಚಂದ್ರಕಲಾ ಅವರು ಮಾತನಾಡಿ, ಭಾರತೀಯ ಪರಂಪರೆಗೆ ಸಂಕ್ರಾಂತಿಗೆ ತನ್ನದೇ ಆದ ಮಹತ್ವವಿದೆ. ಅದನ್ನು ಯುವಪೀಳಿಗೆಗೆ ತಿಳಿಸುವ, ಸಂಕ್ರಾಂತಿ ವಿಶೇಷವನ್ನು ಸಾರಲು ದಿನವೆಲ್ಲ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಗ್ಗಿಯ ಹಾಡಿಗೂ ಹೆಜ್ಜೆ ಹಾಕಲಾಯಿತು ಎಂದು ಹಬ್ಬದ ಸಂಭ್ರಮ ಹಂಚಿಕೊಂಡರು.
Leave a Comment