ಭಟ್ಕಳ: ಜೀವಂತ ವ್ಯಕ್ತಿಗೆ ಸುಳ್ಳು ದಾಖಲೆ ನೀಡಿ ಕೋಟಿ ವಿಮೆ ಪಡೆಯಲು ಸಹಕರಿಸಿದ ಆರೋಪದ ಮೇಲೆ ಪೊಲೀಸರು ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ .
ಹಾಸನ ಮೂಲದ ಮೀನಾಕ್ಷಿ ಬಿ.ಎಚ್ ಎಂಬುವವರು 2021 ಅಗಸ್ಟ್ 21ರಂದು ಜಾಲಿ ಪಟ್ಟಣ ಪಂಚಾಯತಗೆ ಅರ್ಜಿ ಸಲ್ಲಿಸಿ ಎಚ್ .ಬಿ ಹರ್ಷವರ್ಧನ್ ಎನ್ನುವ ವ್ಯಕ್ತಿಯ ಹೆಸರಿನಲ್ಲಿ ಮರಣ ದಾಖಲೆ ನೀಡುವಂತೆ ಕೋರಿದರು. ಅರ್ಜಿ ಜೊತೆಗೆ ಕಳೆದ ಜುಲೈ 21 ರಂದು ಎದೆಯ ನೋವಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ದಾಖಲೆ ಕೂಡ ಲಗತ್ತಿಸಿದ್ದರು .

ಅರ್ಜಿ ವಿಚಾರಣೆ ನಡೆಸಿದ್ದ ಜಾಲಿ ಪಟ್ಟಣ ಪಂಚಾಯತ ಸಿಬ್ಬಂದಿ ಜುಲೈ 27ರಂದು ಜಾಲಿ ಜಂಗನಗದ್ದೆಯಲ್ಲಿ ಹರ್ಷವರ್ಧನ ಮೃತಪಟ್ಟಿರುವ ಬಗ್ಗೆ ವರದಿ ತಯಾರಿಸಿ ಸೆಪ್ಟೆಂಬರ 13 ರಂದು ಮರಣ ದಾಖಲೆ ನೀಡಿದ್ದರು .
ವಿಮೆ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ತನಿಖೆಯಲ್ಲಿ ಪತ್ತೆ : ಮರಣ ದಾಖಲೆ ಪಡೆದ ಮೀನಾಕ್ಷಿಯವರು ಹರ್ಷವರ್ಧನ ಹೆಸರಿನಲ್ಲಿ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಕೋಟಿ ರೂ ವಿಮೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಹಾಸನದ ಅವರ ಕುಟುಂಬದ ಸದಸ್ಯರ ತನಿಖೆ ನಡೆಸಿದ ವಿಮಾ ಕಂಪೆನಿ ತನಿಖಾಧಿಕಾರಿಗಳು ವ್ಯಕ್ತಿ ಜೀವಂತ ಇರುವ ಬಗ್ಗೆ ಖಚಿತ ಪಡಿಸಿಕೊಂಡರು .ಮೃತ ವ್ಯಕ್ತಿಯ ಜಾಡು ಹಿಡಿದು ಹೊರಟ ಅವರಿಗೆ ಜುಲೈ 27 ರಂದು ಭಟ್ಕಳದ ಜಾಲಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ವ್ಯಕ್ತಿ ನವೆಂಬರ 9ರಂದು ಹಾಸನದಲ್ಲಿ ವರ್ಧನ ಎಂಬ ಚಾನಲ್ ತೆರೆದು ಅದನ್ನು ಪ್ರಭಾವಿ ಸಚಿವರಿಂದ ಉದ್ಘಾಟಿಸಿದ ಬಗ್ಗೆ ವಿಡಿಯೊ ದಾಖಲೆ ಸಂಗ್ರಹಿಸಿದರು.
ವ್ಯಕ್ತಿ ಜೀವಂತ ಇರುವ ಬಗ್ಗೆ ಖಚಿತ ಪಡಿಸಿಕೊಂಡ ಅವರು ಭಟ್ಕಳದ ಜಾಲಿ ಪಟ್ಟಣ ಪಂಚಾಯತಗೆ ಬಂದು ಮರಣ ದಾಖಲೆ ನೀಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಜಾಲಿ ಪಟ್ಟಣ ಪಂಚಾಯತ ನೀಡಿದ ವಿಳಾಸದ ತನಿಖೆಗೆ ಹೋದ ತನಿಖಾಧಿಕಾರಿಗಳಿಗೆ ವ್ಯಕ್ತಿ ಅಲ್ಲಿ ವಾಸ ಮಾಡದೇ ಇರುವುದು ಖಚಿತವಾಗಿದೆ
Leave a Comment