ಯಲ್ಲಾಪುರ :ರಾಷ್ಟ್ರೀಯ ಹೆದ್ದಾರಿ 63ರ ಬಿಸಗೋಡ್ ಕ್ರಾಸ್ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಸಮಾಧಿಗಳನ್ನು ಕಿತ್ತು ಹಾಕಿರುವ ಲಾರಿ ಮಾಲೀಕರ ಸಂಘದ ಕ್ರಮದ ವಿರುದ್ಧ ಸವಿತಾ ಸಮಾಜ ಹಾಗೂ ವಿವಿಧ ಸಮಾಜದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಸವಿತಾ ಸಮಾಜ, ನಾಮಧಾರಿ. ಭೋವಿವಡ್ಡರ, ವಾಲ್ಮೀಕಿ, ಭಜಂತ್ರಿ ಮತ್ತಿತರ ಸಮಾಜದ ಪ್ರಮುಖರು ಅಸಮಾಧಾನ ಹೊರಹಾಕಿದರು. ‘ಸವಿತಾ ಸಮಾಜದವರು ಹಾಗೂ ಇತರ ಸಮಾಜದವರು ಈ ಜಾಗದಲ್ಲಿ ಹಲವಾರು ವರ್ಷಗಳಿಂದ ಶವ ಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಪ್ರದೇಶದಲ್ಲಿ 34 ಗುಂಟೆ ಜಾಗವನ್ನು ವಾಹನ ನಿಲುಗಡೆಗಾಗಿ 1940ರಲ್ಲಿಯೇ ಬ್ರಿಟಿಷ್ ಸರ್ಕಾರ ಲಾರಿ ಮಾಲೀಕರ ಸಂಘಕ್ಕೆ ನೀಡಿದ ದಾಖಲೆಯೊಂದಿಗೆಅಲ್ಲಿನ ಸಮಾಧಿಗಳನ್ನೂ ನೆಲಸಮ ಮಾಡಲಾಗಿದೆ. ಅನೇಕ ಕುಟುಂಬದವರಿಗೆ ತಮ್ಮ ಪೂರ್ವಜರ ಸಮಾಧಿಗೆ ನಮಿಸುವುದಕ್ಕೂ ಅವಕಾಶ ಇಲ್ಲದಂತಾಗಿದೆ’ ಎಂದು ನಾಮಧಾರಿ ಸ ಸಮಾಜದ ಅಧ್ಯಕ್ಷ ಸಂತೋಷ ನಾಯ್ಕ ದೂರಿದರು.
ಸಚಿವರು ಈ ಕುರಿತು ಗಮನಹರಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಪಟ್ಟಣ ಪಂಚಾಯಿತಿ ಸದಸ್ಯರೂ ಕುರಿತು ಸಹಕರಿಸಬೇಕು. ಇಲ್ಲವಾದರೆ ಯಲ್ಲಾಪುರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ. ಎಂದರು.
ಭೋವಿವಡ್ಡರ ಸಮಾಜದ ಪ್ರಮುಖ ಮಾರುತಿ ಭೋವಿವಡ್ಡರ, ”ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಆದರೆ, ಕಾಮಗಾರಿಯ ಭರದಲ್ಲಿ ಹಲವು ಸಮಾಧಿಗಳನ್ನು ಕಿತ್ತೆಸೆಯಲಾಗಿದೆ. ಈ ರೀತಿ ಸಮಾಧಿಗಳನ್ನು ಕಿತ್ತಿರುವುದು ಬೇಸರ ತಂದಿದೆ.
ಸವಿತಾ ಸಮಾಜದ ಅಧ್ಯಕ್ಷ ನಾಗರಾಜ ಯಾಮಕೆ ಮಾತನಾಡಿ, ಕಳೆದ ವಾರ ನಮ್ಮ ಸಮಾಜದವರೊಬ್ಬರು ಮೃತಪಟ್ಟಾಗ ಶವ ಸಂಸ್ಕಾರಕ್ಕೆಂದು ಈ ಪ್ರದೇಶಕ್ಕೆ ತಂದು, ಗುಂಡಿ ತೆಗೆದಿದ್ದೆವು. ಇನ್ನೇನು ಶವ ಸಂಸ್ಕಾರ ಮಾಡಬೇಕೆನ್ನುವಷ್ಟರಲ್ಲಿ ನಮ್ಮನ್ನು ತಡೆದು, ಅಲ್ಲಿ ಅವಕಾಶ ನೀಡದೆ ಬೇರೆಡೆ ಕಳುಹಿಸಿದರು. ನಂತರ ಪ.ಪಂ. ಅಧಿಕಾರಿಗಳ ಸಹಕಾರದೊಂದಿಗೆ ಬೇರೆಡೆ ಅಂತ್ಯಕ್ರಿಯೆ ನೆರವೇರಿಸಿದೆವು. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಪಟ್ಟಣದಲ್ಲಿ ಅಲ್ಪಸಂಖ್ಯಾತರು, ಲಿಂಗಾಯತರು ಅವರದ್ದೇ ಆದ ರುದ್ರಭೂಮಿ ಹೊಂದಿದ್ದಾರೆ.
ಆದರೆ, ಬಹುಸಂಖ್ಯಾತ ಹಿಂದುಗಳಿಗೆ ಅಧಿಕೃತ ರುದ್ರಭೂಮಿ ಇಲ್ಲದಿರುವುದು ವಿಪರ್ಯಾಸ. ಹೀಗಾಗಿಯೇ ಇಂತಹ ಅನ್ಯಾಯವಾಗುತ್ತಿದೆ’ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಂತೋಷ ನಾಯ್ಕ ನಾಗರಾಜ ಯಾಮಕೆ, ಮಾರುತಿ ಭೋವಿವಡ್ಡರ, ನಾಗೇಶ ಭೋವಿವಡ್ಡರ, ಜಗನ್ನಾಥ ರೇವಣಕರ, ರವಿ ಪಾಟಣಕರ, ಮಹಾದೇವ ಬೋವಿವಡ್ಡರ, ಸುರೇಶ ಕಟ್ಟದಮನಿ, ಸಂಜು ಜಾಧವ, ಅಶೋಕ ಕೊರವರ, ಮಂಜುನಾಥ ಹೆಗಡೆ, ಬುಚ್ಚಣ್ಣ ಯಾಮಕೆ ಇತರರಿದ್ದರು.
Leave a Comment