
ಯಲ್ಲಾಪುರ;ಯಾವುದೇ ಕ್ಷೇತ್ರದಲ್ಲಿ ಫಲಾಪೇಕ್ಷೆ ಇಲ್ಲದೇ ಮಾಡಿದ ಸಾಧನೆ ಸಮಾಜದಲ್ಲಿ ಬಹುಕಾಲ ನಿಲ್ಲಲು ಸಾಧ್ಯ.ಅಂತಹ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅದು, ಬೇರೆಯವ ಬದುಕಿಗೆ ಪ್ರೇರಣೆ ಯಾದರೆ ಸಾರ್ಥಕವಾದಂತೆ ಎಂದು ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಹೇಳಿದರು.
ಅವರು ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ಘಟಕದ ಸಭಾಭವನದಲ್ಲಿ ಕನ್ನಡ ಕ್ರೀಯಾ ಸಮೀತಿಯ ವತಿಯಿಂದ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಿ ಮಾತನಾಡುತ್ತಿದ್ದರು.ಕೊವಿಡ್ ಪರಿಣಾಮದಿಂದಾಗಿ ಸಾರಿಗೆ ಸಂಸ್ಥೆ ಉಳಿದ ಕ್ಷೇತ್ರದಂತೆ ಸಂಕಷ್ಟ ಅನುಭವಿಸುವಂತಾಗಿದೆ.ಸಾರಿಗೆಯ ಕಾರ್ಯಾಚರಣೆಯಲ್ಲಿ ವ್ಯತಿರಿಕ್ತತೆ ಉಂಟಾಗಿದೆ.ಮುಂದೆ ಸರಿಹೋಗ ಬಹುದೆಂಬ ನಿರೀಕ್ಷೆ ಇದೆ.ಅದು ಆದಷ್ಟು ಬೇಗ ಸಾಧ್ಯವಾಗಲೆಂದರು.
ಪತ್ರಕರ್ತ ಸುಬ್ರಾಯ ಬಿದ್ರೆಮನೆ ಮಾತನಾಡಿ,ಬದುಕಿನ ಒತ್ತಡದ,ಸಂಕಷ್ಟದ ಕಾರ್ಯನಿರ್ವಹಣೆಯ ನಡುವೆಯೂ,ಸಾರಿಗೆ ನೌಕರರು ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪರಿಪಾಠ ಹಾಕಿಕೊಂಡು ಮುನ್ನೆಡೆಯುವ ಮೆಲ್ಪಂಕ್ತಿ ಅನುಕರಣೀಯ ಎಂದರು.
ಆಟೋಚಾಲಕ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ,ಸಾರಿಗೆ ಸಂಸ್ಥೆ ಕನ್ನಡದ ಕಳಕಳಿ ಹೊಂದಿ,ಕನ್ನಡತನ ಪೋಷಿಸುವ ಕೆಲಸ ಮಾಡಿಕೊಂಡು ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ವೆಂಕಟ್ರಮಣ ಗಾಂವ್ಕಾರ ಬಿದ್ರೆಮನೆ,ಸಮಾಜ ಸೇವಕ ದೇವಿದಾಸ ತಳೆಕರ್,ಆರೋಗ್ಯ ಇಲಾಖೆಯ ಶುಶ್ರೂಷಕರಾದ ಜ್ಯೋತಿ ಉಡಕೇರಿ,ಅಶ್ವಿನಿ ಹರಿಕಂತ್ರ,ಅಗ್ನಿ ಶಾಮಕ ಅಧಿಕಾರಿ ಹನುಮಂತ ನಾಯ್ಕ,ನಿವೃತ್ತಿ ಅಂಚಿನಲ್ಲಿರುವ ಚಾಲಕ ಎಂ.ಕೆ.ಮೇಸ್ತ್ರಿ,ನಿರ್ವಾಹಕರಾದ ವಿ.ಡಿ.ನರಬೆಂಚಿ,ಎಸ್.ವೈ,ಕೊಲಕರ ಅವರನ್ನು ಸನ್ಮಾನಿಸಲಾಯಿತು.
ಅಲ್ಲದೇ ಸಾರಿಗೆ ಸಂಸ್ಥೆಯ ಸಿಬ್ಬಂದ್ದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸನ್ಮಾನ ಸ್ವೀಕರಿಸಿದ ವೆಂಕಟ್ರಮಣ ಗಾಂವ್ಕಾರ ಮಾತನಾಡಿ,ಮೂಲಭೂತ ಸೌಲಭ್ಯಗಳು ಇಲ್ಲದ ಸಂದರ್ಭದಲ್ಲಿ ನಾಲ್ಕು ದಶಕಗಳ ಕಾಲ ಯಕ್ಷಗಾನದ ಸೇವೆ ಸಲ್ಲಿಸಿದ್ದೇನೆ.ಸನ್ಮಾನ ಕಲಾ ಕ್ಷೇತ್ರಕ್ಕೆ ಸಂದ ಗೌರವ ಎಂದರು.ಸಂಸ್ಥೆಯ ಸಿಬ್ಬಂದ್ದಿಗಳಾದ ಅರವಿಂದ.ಪಿ.ನಾಯ್ಕ,ಆರ್.ಜಿ.ಶೇಟ ಉಪಸ್ಥಿತರಿದ್ದರು.ಎಂ.ಎನ್.ಭಾಗ್ವತ್ ಸ್ವಾಗತಿಸಿ ನಿರೂಪಿಸಿದರು.ವಿ.ಎನ್.ಹೊನ್ನಾವರ ವಂದಿಸಿದರು.
Leave a Comment