ಕಾರವಾರ: ಗಾಂಜಾ ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸಿಜೆಎಂ ನ್ಯಾಯಾಲಯವು ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 1000 ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ನಗರದ ಬೈತಖೋಲದ ರತ್ನಾಕರ ಗೌಡ ಶಿಕ್ಷೆಗೊಳಗಾದ ಅಪರಾಧಿ. ಈತನು ಕಳೆದ 2018ರ ನವೆಂಬರ್ 27 ರಂದು ನಗರದ ಧೋಭಿಘಾಟ್ ಹತ್ತಿರ ತನ್ನ ಬಳಿ ಸುಮಾರು 3500 ರೂ. ಮೌಲ್ಯದ ಗಾಂಜಾವನ್ನು ಇರಿಸಿಕೊಂಡಿದ್ದ ವೇಳೆ ಖಚಿತ ಮಾಹಿತಿ ಪಡೆದ ಅಂದಿನ ಪಿಎಸ್ಐ ನವೀನ ನಾಯ್ಕ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಾಗಿತ್ತು.
ಬಳಿಕ ಪಿಎಸ್ಐ ಎಸ್. ಬಿ. ಪೂಜಾರಿ ಅವರು ಪ್ರಕರಣದ ಬಗ್ಗೆ ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಇದೀಗ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ. ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಎನ್. ಎಂ. ರಮೇಶ ಅವರು ಆರೋಪಿಯ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 1 ವರ್ಷ ಕಾರಾಗೃಹವಾಸ ಹಾಗೂ 1000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತೀರ್ಪು ನೀಡುತ್ತಿದ್ದಂತೆ ಆರೋಪಿಯನ್ನು ನೇರವಾಗಿ ಜೈಲಿಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾದ ಮಹಾದೇವ ಗಡದ ಹಾಗೂ ಬಳಿಕ ಮಂಜುನಾಥ ನಾಯ್ಕ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.
Leave a Comment