
ಯಲ್ಲಾಪುರ : ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಜಿ-2 ಮಾದರಿ ವಸತಿ ಸಮುಚ್ಛಯಗಳಿಗೆ ಮುಂಗಡ ಹಣ ಪಾವತಿ ಮಾಡುವಲ್ಲಿ ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದು, 570 ಫಲಾನುಭವಿಗಳ ಪೈಕಿ ಕೇವಲ 120 ಜನ ಮುಂಗಡ ಹಣ ಪಾವತಿಸಿದ್ದು, ಬಾಕಿ ಉಳಿದಿರುವವರು ಬರುವ ಎಪ್ರಿಲ್ 15 ರ ಒಳಗಾಗಿ ಹಣ ಪಾವತಿ ಮಾಡುವಂತೆ ವಾರ್ಡ್‌ನ ಸದಸ್ಯರು ಫಲಾನುಭವಿಗಳಿಗೆ ಸೂಚಿಸುವಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ತಿಳಿಸಿದರು.

ಗುರುವಾರ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಸಾಧಾರಣ ಸಭೆ ನಡೆಯಿತು.. ಸಭೆಯಲ್ಲಿ ಪಟ್ಟಣದಲ್ಲಿ ಪ್ರಸ್ತುತ ಕಾಮಗಾರಿಗಳ ಪ್ರಗತಿಯ ಕುರಿತು ಚರ್ಚಿಸಲಾಯಿತು. ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರಿಗೆ ನೋಟೀಸ್ ನೀಡುವಂತೆ ಸದಸ್ಯರೆಲ್ಲರೂ ಒತ್ತಾಯಿಸಿದರು. ಅಂತೆಯೇ ಪಟ್ಟಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆಂದು ಸ್ಥಾಪಿಸಲಾಗಿದ್ದ ಬೇಡ್ತಿ, ಯರಕಿನ ಬೈಲ್ ಹಾಗೂ ವೈಟಿಎಸ್‌ಎಸ್ ಹಿಂಭಾಗದಲ್ಲಿರುವ ಕಟ್ಟಡಗಳನ್ನು ಉಪಯೋಗಿಸದೇ ಇರುವುದರಿಂದ ಅವುಗಳಿಗೆ ನೀಡಲಾದ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಪ್ರತಿ ತಿಂಗಳು ಅಂದಾಜು 20 ಸಾವಿರ ಹೆಚ್ಚುವರಿ ಹೊರೆಯನ್ನು ತಗ್ಗಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಇನ್ನುಳಿದಂತೆ 2021-22ನೇ ಸಾಲಿನ ಪಟ್ಟಣ ಪಂಚಾಯತ ನಿಧಿಯ 24.10%, 7.25% ಹಾಗೂ 5% ಯೋಜನೆಯಡಿಯಲ್ಲಿ ಕರೆದ ಟೆಂಡರ್ ಕಾಮಗಾರಿಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಸ್ಥಾಯಿ ಸಮಿತಿ ಅಧ್ಯಕ್ಷ ಆದಿತ್ಯ ಗುಡಿಗಾರ, ಎಲ್ಲ ವಾರ್ಡ್‌ನ ಸದಸ್ಯರು ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಟ್ಟಣಕ್ಕೆ 570 ಜಿ-2 ಮಾದರಿ ವಸತಿಗೃಹಗಳು ಮಂಜೂರಾಗಿದ್ದು, ಈವರೆಗೆ ಕೇವಲ 120 ಫಲಾನುಭವಿಗಳು ಮುಂಗಡ ಹಣ ಪಾವತಿಸಿರುತ್ತಾರೆ. ಮೊದಲ ಹಂತದಲ್ಲಿ 160 ಮನೆಗಳನ್ನು ಪೂರ್ಣಗೊಳಿಸಬೇಕಿದ್ದು, ಹಣ ಪಾವತಿಸಿದಲ್ಲಿ ಮಾತ್ರ ಮನೆ ಪಡೆಯಲು ಅರ್ಹರಾಗಿರುತ್ತಾರೆ. ಒಂದು ವೇಳೆ ಹಣ ಪಾವತಿಸದೇ ನಿರಾಸಕ್ತಿ ತೋರಿದ್ದಲ್ಲಿ, ಇನ್ನುಳಿದ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಬೇಕಾಗುತ್ತದೆ.—ಸಂಗನ ಬಸಯ್ಯ, ಪ.ಪಂ. ಮುಖ್ಯಾಧಿಕಾರಿ
Leave a Comment