ಯಲ್ಲಾಪುರ: ನಾವುಗಳೆಲ್ಲ ಯುದ್ಧಕ್ಕೆ ಇಳಿಯದೆ ಸೋತಂತೆ ವರ್ತಿಸುತ್ತೇವೆ.ಪಯಣಕ್ಕೆ ಶಕ್ತಿ ಬೇಕು.ಮೆದುಳಿಗೆ ಒಳ್ಳೆಯ ಮೇವು ನೀಡುವ ಬುತ್ತಿ. ಬದುಕು ಪಯಣದ ಬುತ್ತಿ ಕೃತಿಯಲ್ಲಿ ಚಿಂತನೆಗೆ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಪರಿಸರ ತಜ್ಞ ,ಬರಹಗಾರ ಶಿವಾನಂದ ಕಳವೆ ಹೇಳಿದರು.
ಅವರು ಪಟ್ಟಣದ ಅಡಿಕ ಭವನದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಉತ್ತರಕನ್ನಡ ಸಹಯೋಗದಲ್ಲಿ ವಿಶ್ರಾಂತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ರಚಿತ `ಬದುಕು ಪಯಣದ ಬುತ್ತಿ’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃತಿ ಬಿಡುಗಡೆಗೊಳಿಸಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಅಹಂಕಾರ ವೆಂಬುದು ಮನುಷ್ಯನ ಬದುಕಿನಲ್ಲಿ ಅತ್ಯಂತ ಅಪಾಯಕಾರಿ. ಅದನ್ನು ಸಮಾಜಕ್ಕೆ ತಿಳಿಸುವ ಶ್ರೀರಂಗ ಕಟ್ಟಿಯವರ ಬದುಕು ಪಯಣದ ಬುತ್ತಿಯೊಳಗಿನ ಸಾಲುಗಳು ಗಂಭೀರತೆಯ ತತ್ವವನ್ನು ಬಿಚ್ಚಿಡುವ ಪ್ರಯತ್ನ ಮಾಡಿವೆ, ಇಂತಹ ಸಾಲುಗಳು ಸಾರ್ವಜನಿಕ ಬದುಕಿನಲ್ಲಿ ಪಯಣಿಸುತ್ತಿರುವ ನಮಗೆಲ್ಲಾ ಪ್ರೇರಣಾದಾಯಕವಾಗಿದೆ ಎಂದರು.
.
ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಕೆ. ಗಾಂವಕರ ಕೃತಿ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಕೃತಿಗೆ ಮುನ್ನುಡಿ ಬರೆದ ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ, ಬೆನ್ನುಡಿ ಬರೆದ ನಾಗರಿಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಕೃತಿಗೆ ಚಿತ್ರ ಬಿಡಿಸಿದ ಕಲಾವಿದ ಸತೀಶ ಯಲ್ಲಾಪುರ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಭರತನಾಟ್ಯ ಕಲಾವಿದೆ. ಶ್ರೀರಂಗ ಕಟ್ಟಿ ಕುಟುಂಬದ ಸದಸ್ಯೆ ಶೃತಿ ಶ್ರೀವತ್ಸ ಕಟ್ಟಿ ಇವರನ್ನು ಸನ್ಮಾನಿಸಲಾಯಿತು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಿದ್ದರು. ವಿಕಾಸ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ ಉಪಸ್ಥಿತರಿದ್ದರು. ಕೃತಿ ಕೃತ ಶ್ರೀರಂಗ ಕಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ರೇಖಾ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಡಾ. ರವಿ ಭಟ್ಟ ಬರಗದ್ದೆ ನಿರೂಪಿಸಿದರು.
Leave a Comment