ಕುಮಟಾ : ತಾಲೂಕಿನ ಬಾಡದಲ್ಲಿ ಸಮುದ್ರ ಪಾಲಾದ ಬೆಂಗಳೂರಿನ ಇನ್ನಿಬ್ಬರು ಪ್ರವಾಸಿಗರ ಶವ ಮೂರನೇ ದಿನವಾದ ಸೋಮವಾರ ಪತ್ತೆಯಾಗಿದೆ.
ಪ್ರವಾಸಕ್ಕೆಂದು ತಾಲೂಕಿನ ಬಾಡದ ಕಡಲತೀರಕ್ಕೆ ಶನಿವಾರ ಆಗಮಿಸಿ ಸಮುದ್ರಕ್ಕಿಳಿದವರಲ್ಲಿ ನಾಲ್ವರು ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಅದರಲ್ಲಿ ಇಬ್ಬರ ಶವ ಪತ್ತೆಯಾಗಿತ್ತು. ರಾಜಾಜಿನಗರ ಹಾಲಿ ಜೆಪಿ ನಗರದ ಸಿಎ ವಿದ್ಯಾರ್ಥಿ ತೇಜಸ್ ದಾಮೋದರ ಮತ್ತು ಬೆಂಗಳೂರಿನ ಕನಕಪುರ ರಸ್ತೆಯ ಸಿಎ ಫಾರ್ಮ್ ನೌಕರ ಕಿರಣಕುಮಾರ್ ಮರಿರಾಜ ಜಿ ಎಂಬುವವರನ್ನು ಪತ್ತೆ ಹಚ್ಚಲು ಸಮುದ್ರದಲ್ಲಿ ಶೋಧ ಕಾರ್ಯ ಸಾಗಿತ್ತು.
ಸೋಮವಾರ ಬೆಳಗ್ಗೆ ಅದೇ ಸಮುದ್ರ ಪ್ರದೇಶದಲ್ಲಿಯೇ ಅಂದರೆ ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತೇಜಸ್ ಅವರ ಶವ ಮತ್ತು ಜೇಷ್ಠಪುರದಲ್ಲಿ ಕಿರಣಕುಮಾರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ತಾಲೂಕು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
Leave a Comment