ಯಲ್ಲಾಪುರ : ಅನೇಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಬೇಡ್ತಿ ನೀರನ್ನು ಪಟ್ಟಣಕ್ಕೆ ತರುವ ಯೋಜನೆಯಲ್ಲಿ ಬಳಸಲಾದ ಅನೇಕ ವಸ್ತುಗಳು ಹಾಳಾಗುತ್ತಿದೆ. ಅವುಗಳನ್ನು ಸಚಿವರ ಗಮನಕ್ಕೆ ತರಲಾಗಿದ್ದು, ಎಲ್ಲ ವಸ್ತುಗಳನ್ನು ಇತರೆ ಕಾರ್ಯಗಳಲ್ಲಿ ಮರುಬಳಕೆ ಮಾಡುವಂತೆ ಅವರು ಸೂಚಿಸಿರುವುದಾಗಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ಸಭೆಯಲ್ಲಿ ತಿಳಿಸಿದರು.
ಪಟ್ಟಣ ಪಂಚಾಯತದ ಸಭಾಭವನದಲ್ಲಿ ನಡೆದ ಸರ್ವ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ೭.೧೯ ಎಕರೆ ಸರ್ಕಾರಿ ಜಾಗವನ್ನು ಪ.ಪಂ. ಸುಪರ್ದಿಗೆ ಈಗಾಗಲೇ ಪಡೆದುಕೊಳ್ಳಲಾಗಿದ್ದು ಆ ಸ್ಥಳವನ್ನು ಸಂತೆ ಮಾರುಕಟ್ಟೆ ನಿರ್ಮಿಸುವ ಕುರಿತು ತಾಲೂಕು ದಂಡಾಧಿಕಾರಿಗಳಲ್ಲಿ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಕಾರ್ಯಗತಗೊಳ್ಳಲಿದೆ ಎಂದು ತಿಳಿಸಿದರು.

ಕಳೆದ ಚುನಾವಣೆ ಸಂದರ್ಭದಲ್ಲಿ ವಾರ್ಡ್ ಪುನರ್ ವಿಂಗಡಣೆಯಾಗಿದ್ದ ಕಾರಣ ಮತದಾರರ ಹೆಸರಗಳು ಇತರೆ ವಾರ್ಡ್ಗಳೊಂದಿಗೆ ಸೇರಿಕೊಂಡಿದ್ದರಿAದ ಗೊಂದಲಕ್ಕೆ ಕಾರಣವಾಗಿತ್ತು. ಅನೇಕ ಸಭೆಗಳಲ್ಲಿ ವಾರ್ಡ್ಗಳ ವ್ಯಾಪ್ತಿ ಗುರುತಿಸಿ ಸದಸ್ಯರಿಗೆ ಮಾಹಿತಿ ನೀಡಿ ಎಂದು ಕೋರಲಾಗಿತ್ತು. ಇದಾವುದೂ ಜರುಗದಿರುವ ಕಾರಣ ವಾರ್ಡ್ ವ್ಯಾಪ್ತಿಯ ಗೊಂದಲ ಹಾಗೆಯೇ ಉಳಿದಿದೆ. ಇದರಿಂದಾಗಿ ಕಾಮಗಾರಿಗಳಿಗೆ ಸಮಸ್ಯೆ ಉಂಟಾಗಲಿದ್ದು ತಕ್ಷಣ ವಾರ್ಡ್ ಗಡಿಯನ್ನು ನಿಗಧಿ ಪಡಿಸಿ ಮಾಹಿತಿ ನೀಡಬೇಕಿದೆ ಎಂದು ಸದಸ್ಯ ರಾಧಾಕೃಷ್ಣ ನಾಯ್ಕ ಸಭೆಯಲ್ಲಿ ಆಗ್ರಹಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಗಟಾರದ ಕಸ ಸ್ವಚ್ಛಗೊಳಿಸುತ್ತಿದ್ದು, ತ್ಯಾಜ್ಯವನ್ನು ಸಕಾಲಕ್ಕೆ ಸಾಗಿಸದೇ ಅಲ್ಲಿಯೇ ಬಿಟ್ಟಿರುವುದರಿಂದ ಮತ್ತೆ ಗಟಾರ ಸೇರುವ ಸಾಧ್ಯತೆಗಳಿದ್ದು ತಕ್ಷಣ ವಿಲೇವಾರಿ ಮಾಡಬೇಕೆಂದು ಸದಸ್ಯರೆಲ್ಲಾ ಆಗ್ರಹಿಸಿದರು. ಈ ಕಾರ್ಯದ ಜವಾಬ್ದಾರಿ ವಹಿಸಿದ್ದ ಸಿಬ್ಬಂದಿಗೆ ತಕ್ಷಣ ಕೆಲಸ ಮಾಡುವಂತೆ ಅಧ್ಯಕ್ಷೆ ಸುನಂದಾ ದಾಸ್ ಸೂಚಿಸಿದರು.
ಬಸವೇಶ್ವರ ನಗರದ ಹಳೆಯ ಪೆಟ್ರೋಲ್ ಪಂಪ್ ಬಳಿ ಲೋಕೋಪಯೋಗಿ ಇಲಾಖೆಗೆ ಸಂಬAಧಿಸಿದ ರಸ್ತೆಯಂಚಿನ ಗಟಾರದ ಮುಚ್ಚಳಿಕೆ ಒಡೆದುಹೋಗಿದ್ದು ಇದು ಅತ್ಯಂತ ಅಪಾಯಕಾರಿಯಾಗಿದೆ. ಆದ್ದರಿಂದ ಇದನ್ನು ತಕ್ಷಣ ಸರಿಪಡಿಸುವಂತೆ ಇಲಾಖೆಗೆ ಸೂಚನಾ ಪತ್ರ ಕಳುಹಿಸಲು ಸದಸ್ಯರು ಸಲಹೆ ನೀಡಿದರು.
ಪ.ಪಂ ಗೆ ಅಗತ್ಯವಿರುವ ಡಾಟಾ ಎಂಟ್ರಿ ಆಪರೇಟರ್ ಮಂಜೂರಿ, ವಾಹನ ಬಾಡಿಗೆ ಟೆಂಡರ್ ಮಂಜೂರಿ, ನೀರು ಸರಬರಾಜಿನ ಪೈಪ್ ಲೈನ್ ನಿರ್ವಹಣೆ ಇನ್ನಿತರ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಯಿತು.
ಸಭೆಯಲ್ಲಿ ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಸ್ಥಾಯಿ ಸಮಿತಿ ಅಧ್ಯಕ್ಷ ಆದಿತ್ಯ ಗುಡಿಗಾರ, ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ವಾರ್ಡ್ ಸದಸ್ಯರು ಉಪಸ್ಥಿತರಿದ್ದರು. ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ಅಕಾಲಿಕವಾಗಿ ನಿಧನಹೊಂದಿದ ಪ.ಪಂ. ವಾಲ್‌ಮನ್ ದೇವದಾನ್ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Leave a Comment