ಯಲ್ಲಾಪುರ: ದಾರಿಯಲ್ಲಿ ನಿಲ್ಲಿಸಿಟ್ಟ ಟ್ಯಾಂಕರ್ ಲಾರಿಯ ಡೀಸೆಲ್ ಟ್ಯಾಂಕಿನ ಸೆನ್ಸಾರ್ ಕ್ಯಾಪ್ ಸ್ಕ್ರೂ ತೆಗೆದು ಲಾರಿಯಲ್ಲಿನ ಡೀಸೆಲ್ ಕದ್ದ ನಾಲ್ವರು ಅಂತರ ರಾಜ್ಯ ಕಳ್ಳರನ್ನು ಯಲ್ಲಾಪರ ಪೋಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ರಾಜೇಂದ್ರ ಪವಾರ್, ಭಾಗ್ವತ್ ಕಾವಡೆ, ಕಾಳಿದಾಸ ಕಾಳೆ ಹಾಗೂ ಆಕಾಶ ಪವಾರ ಬಂಧಿತ ಆರೋಪಿಗಳು. ಹಾವೇರಿ ಜಿಲ್ಲೆಯ ಅರಿಕಟ್ಟಿ ಗ್ರಾಮದ ಹನುಮಗೌಡ ಹೊಂಡದ ಎನ್ನುವವರು ಇತ್ತೀಚೆಗೆ ತಮ್ಮ ಟ್ಯಾಂಕರ್ ನ್ನು ತಾಲೂಕಿನ ಹಳಿಯಾಳ ಕ್ರಾಸಿನ ಹೆದ್ದಾರಿಯ ಪಕ್ಕದಲ್ಲಿಟ್ಟು ನಿದ್ರಿಸುತ್ತಿದ್ದಾಗ ರಾತ್ರಿ ಕಳ್ಳರು ಡೀಸೆಲ್ ಕದ್ದ ಬಗ್ಗೆ ದೂರು ನೀಡಿದ್ದರು. ಲಾರಿಯಲ್ಲಿದ್ದ ಸುಮಾರು 30 ಸಾವಿರ ರೂ. ಮೌಲ್ಯದ 360 ಲೀ. ಡೀಸೆಲನ್ನು ಕದ್ದಿರುವುದಾಗಿ ಉಲ್ಲೇಖಿಸಿದ್ದರು.
ದೂರಿನನ್ವಯ ಪ್ರಕರಣವನ್ನು ಬೆನ್ನತ್ತಿದ ಪೋಲೀಸರು ಖಚಿತ ಮಾಹಿತಿ ಮೇರೆಗೆ ನಾಲ್ವರನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ಲಾರಿ ಮತ್ತು ಇತರೆ ಸ್ವತ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಿ.ಪಿ.ಐ. ಸುರೇಶ ಯಳ್ಳೂರು ಅವರ ನೇತೃತ್ವದಲ್ಲಿ, ಪಿ.ಎಸ್.ಐ.ಗಳಾದ ಮಂಜುನಾಥ ಗೌಡರ್, ಅಮೀನ್ ಸಾಬ್ ಅತ್ತಾರ ಹಾಗೂ ಸಿಬ್ಬಂದಿಗಳಾದ ಬಸವರಾಜ, ಮಹ್ಮದ ಶಫಿ, ಗಜಾನನ, ಮಹಾಂತೇಶ, ಮುತ್ತಣ್ಣ, ನಂದೀಶ, ಚಿದಾನಂದ, ಯಲ್ಲಪ್ಪಾ, ಶೋಭಾ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
Leave a Comment