ಯಲ್ಲಾಪುರ : ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಆಗಲೇ ಬಾರದೆಂದು ಹಠ ಹೊತ್ತಿರುವ ಕೆಲ ಢೋಂಗಿ ಪರಿಸರವಾದಿಗಳು, ಸರ್ಕಾರ ಎಂದೆಲ್ಲಾ ಯೋಜನೆಯ ಕುರಿತು ಮಾತನಾಡುತ್ತದೆಯೋ, ಆಗ ಮಾತ್ರ ಅವರ ಪರಿಸರ ಪ್ರೇಮ ಜಾಗೃತವಾಗಿ ಮಳೆಗಾಲದಲ್ಲಿ ಮೇಲೇಳುವ ಉಂಬಳಗಳಂತೆ ವರ್ತಿಸುತ್ತಾರೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆರೋಪಿಸಿದ್ದಾರೆ.
ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, 16 ವರ್ಷಗಳ ಹಿಂದೆ ಪರಿಸರವಾದಿಗಳೆಂದು ಕರೆಯಿಸಿಕೊಳ್ಳುವವರ ಕಾರಣದಿಂದಾಗಿ ನೆನೆಗುದಿಗೆ ಬಿದ್ದಿರುವ ಅಂಕೋಲಾ-ಹುಬ್ಬಳ್ಳಿ ರೈಲ್ವೇ ಯೋಜನೆಯು ಮತ್ತೆ ಆರಂಭವಾಗಬೇಕೆಂಬುದು ಎಲ್ಲರ ಆಶಯವಾಗಿದೆ. ಈ ಕುರಿತು ಸರ್ಕಾರದ ಮೇಲೆ ಎಲ್ಲ ರೀತಿಯ ಒತ್ತಡ ಹಾಗೂ ಕಾನೂನಿನ ಮೊರೆ ಹೋಗಲಾಗುತ್ತಿದೆ. ಆದರೂ ಸಹ ಪರಿಸರದ ಹೆಸರಿನಲ್ಲಿ ಯೋಜನೆ ಜಾರಿಗೆ ತರುವಲ್ಲಿ ಸಫಲರಾಗುತ್ತಿಲ್ಲ.
ಇವರು ನಿಜವಾಗಲೂ ಪರಿಸರ ಪ್ರೇಮಿಗಳೇ ಆಗಿದ್ದಲ್ಲಿ, ಇಂತಹ ಕಳ್ಳಾಟ ಮಾಡುವ ಬದಲು ಕಳೆದ 16 ವರ್ಷಗಳಲ್ಲಿ ಒಂದು ಬಾರಿಯಾದರೂ ಜನರನ್ನು ಸೇರಿಸಿ, ಮುಖಾಮುಖಿ ಚರ್ಚಿಸಿ ಯೋಜನೆಯ ಸಾಧಕ ಬಾಧಕಗಳನ್ನು ಮನದಟ್ಟು ಮಾಡಿಸುತ್ತಿದ್ದರು. ಈ ರೀತಿ ಕದ್ದು ಮುಚ್ಚಿ ಕಾನೂನು ಮರೆ ಹೋಗುವ ಅವಶ್ಯಕತೆ ಇರಲಿಲ್ಲ.
ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ತಾಳಗುಪ್ಪ-ಖಾನಾಪುರ ಹಾಗೂ ಕೈಗಾ ಬಂಕಾಪುರ ರಾಜ್ಯ ಹೆದ್ದಾರಿ ಮೇಲ್ದರ್ಜೆ, ಶಿರಸಿ-ತಾಳಗುಪ್ಪ ರೈಲ್ವೆ ಯೋಜನೆಯ ಚರ್ಚೆ ಸೇರಿದಂತೆ ಜಿಲ್ಲೆಯಲ್ಲಿ ಮಾಡಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳು ಪರಿಸರಕ್ಕೆ ಯಾವುದೇ ಹಾನಿ ಮಾಡುವುದಿಲ್ಲವಾದರೆ ಉತ್ತರ ಕರ್ನಾಟಕ ಹಾಗೂ ಕರಾವಳಿಯನ್ನು ಬೆಸೆಯುವ ಕೊಂಡಿಯಾಗಿರುವ ಅಂಕೋಲಾ ಹುಬ್ಬಳ್ಳಿ ರೈಲ್ವೆ ಯೋಜನೆ ಮಾತ್ರ ಹೇಗೆ ಪರಿಸರ ನಾಶ ಮಾಡುತ್ತದೆ ಎಂಬುದು ನಮ್ಮ ಪ್ರಶ್ನೆಯಾಗಿದೆ.
ಇದು ಕೇವಲ ಸಾರ್ವಜನಿಕ ಸಂಚಾರ ಅಥವಾ ವಾಣಿಜ್ಯ ಉಪಯೋಗಕ್ಕೆ ಸೀಮಿತವಾಗಿಲ್ಲದೆ ಕೈಗಾ ಸೀಬರ್ಡ್ ಬಂದರು ಇತ್ಯಾದಿ ರಾಷ್ಟ್ರೀಯ ಯೋಜನೆಗಳಿಗೆ ಪೂರಕವಾಗಿ ಹಾಗೂ ದೇಶದ ರಕ್ಷಣಾ ವಲಯದಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ. ಇಲ್ಲಿಯವರೆಗೆ ಸರ್ಕಾರಕ್ಕೆ ಅಥವಾ ಅಧಿಕಾರಿಗಳಿಗೆ ಬೇಕಾದ ಯೋಜನೆಗಳು ಎಷ್ಟೇ ತಕರಾರಿದ್ದರು ಜಾರಿಗೆ ಬರುತ್ತಿವೆ. ಆದರೆ ಜನ ಸಾಮಾನ್ಯರಿಗೆ ಬೇಕಾದ ಯಾವುದೇ ಯೋಜನೆ ಬಂದರು, ನೂರೆಂಟು ವಿಘ್ನಗಳು ಎದುರಾಗುತ್ತಿವೆ. ಎಲ್ಲವನ್ನು ಹೋರಾಟದ ಮೂಲಕವೇ ಪಡೆಯಬೇಕಾದ ವಿಪರ್ಯಾಸ ಉಂಟಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಈ ರೈಲ್ವೆ ಯೋಜನೆಯು ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿದೆ. ಅಂಕೋಲಾದಲ್ಲಿ ನಿರ್ಮಿಸಲಾಗುವ ವಿಮಾನ ನಿಲ್ದಾಣಕ್ಕೂ ಸಂಪರ್ಕಿಸಲು ಸಹಾಯಕವಾಗಲಿದೆ. ಅಭಿವೃದ್ಧಿಯ ದೃಷ್ಟಿಯಿಂದ ಆದಷ್ಟು ಬೇಗ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಲೆನಾಡು ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಜಿಲ್ಲಾ ಆಟೋ ಚಾಲಕರ ಸಂಘದ ಸಂತೋಷ ನಾಯ್ಕ, ವಿನೋದ ತಳೇಕರ್, ಮಾಧವ ನಾಯಕ ಇದ್ದರು.
Leave a Comment