2019ರಲ್ಲಿ ಭಾರೀ ಪ್ರಮಾಣದಲ್ಲಿ ಸೇವನೆ: ವರದಿ ಶೇ.47 ಆ್ಯಂಟಿಬಯಾಟಿಕ್‌ಗೆ ಅನುಮತಿಯೇ ಇಲ್ಲ
ನವದೆಹಲಿ: ಅನುಮತಿ ಪಡೆ ಯದ ಔಷಧಗಳ ಬಳಕೆ ಭಾರತ ದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, 2019ರಲ್ಲಿ ದೇಶದ ಖಾಸಗಿ ವಲಯದಲ್ಲಿ ಮಾರಾಟವಾದ ಶೇ.47ರಷ್ಟು ಆ್ಯಂಟಿ ಬಯೋಟಿಕ್ಸ್‌ಗಳನ್ನು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿಯೇ ಇರಲಿಲ್ಲ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ 2019ರ ಒಂದೇ ವರ್ಷ ಭಾರತಿ ಯರು ಸುಮಾರು 500 ಕೋಟಿ ಡೋಸ್ ಆ್ಯಂಟಿಬಯಾಟಿಕ್ ಸೇವಿಸಿದ್ದಾರೆ ಎಂಬುದೂ ಪತ್ತೆಯಾಗಿದೆ.
ಇನ್ನು ಭಾರತದಲ್ಲಿ ಅಜಿತ್ರೋಮೈಸಿನ್ 500 ಎಂಜಿ ಮಾತ್ರೆಯು ಜನರು ಅತ್ಯಂತ ಹೆಚ್ಚು ತೆಗೆದುಕೊಳ್ಳುವ ಆ್ಯಂಟಿ ಬಯೋಟಿಕ್ ಔಷಧಿಯಾಗಿದೆ. ಇದು ಶೇ.7.6ರ ಪಾಲು ಹೊಂದಿದೆ. ಇದಾದ ನಂತರ ಸೆಫಿಕ್ಸಿಮ್ 200 ಎಂಜಿ ಮಾತ್ರ 2ನೇ ಸ್ಥಾನದಲ್ಲಿದೆ ಎಂದು ಪ್ರಖ್ಯಾತ ವೈದ್ಯಕೀಯ ನಿಯತಕಾಲಿಕೆ ‘ಲ್ಯಾನೆಟ್’ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಹೇಳಿದೆ.
ಹೀಗೆ ಗೊತ್ತುಗುರಿಯಿಲ್ಲದೆ ನೇರವಾಗಿ ಆ್ಯಂಟಿ ಬಯೋಟಿಕ್ಸ್ ಖರೀದಿ ಮಾಡಿ ಸೇವನೆ ಮಾಡುವ ಪ್ರವೃತ್ತಿ ಹೆಚ್ಚುತ್ತಿರು ವುದು ಆತಂಕಕಾರಿ ವಿಷಯ, ಇದು ಜನ ರಲ್ಲಿ ರೋಗ ನಿರೋಧಕ ಶಕ್ತಿಯನ್ನೇ ಕುಂಡಿಸುತ್ತಿದೆ. ಭಾರತದಲ್ಲಿ ಬಹು ಬ್ಯಾಕ್ಟಿರಿಯಾ ಸೋಂಕು ಹೆಚ್ಚಿದೆ.
ಅದಕ್ಕೆಂದೇ ಆ್ಯಂಟಿ ಬಯೋಟಿಕ್‌ಗಳ ಬೇಕಾಬಿಟ್ಟಿ ಬಳಕೆ ನಡೆದಿದೆ ಎಂದು ವರದಿ ಎಚ್ಚರಿಸಿದೆ. ಪ್ರತಿ ವಯಸ್ಕ ವ್ಯಕ್ತಿಗೆ ನಿತ್ಯ ನೀಡುವ ಸರಾಸರಿ ಡೋಸ್ ಆಧರಿಸಿ ಮಾಡಿದ ಲೆಕ್ಕಾಚಾರದ ಅನ್ವಯ 2019ರಲ್ಲಿ 507 ಕೋಟಿ ಡೋಸ್‌ನಷ್ಟು ಆ್ಯಂಟಿ ಬಯೋಟಿಕ್ಸ್ ಅನ್ನು ಭಾರತೀಯರು ಸೇವಿಸಿರುವ ಅಂದಾಜಿದೆ.
ಈ ಪೈಕಿ ಶೇ.47ರಷ್ಟು ಆ್ಯಂಟಿ ಬಯೋಟಿಕ್ಸ್‌ಗಳು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದುಕೊಂಡ ಪಟ್ಟಿಯಲ್ಲಿ ಇಲ್ಲ ಎಂದು ಭಾರತದ ಖಾಸಗಿ ಆಸ್ಪತ್ರೆಗಳು/ಔಷಧ ಅಂಗಡಿಗಳು ನೀಡುವ ಔಷಧಗಳ ಬಗ್ಗೆ ಅಮೆರಿಕದ ಬೋಸ್ಟನ್ ವಿವಿ ಹಾಗೂ ದಿಲ್ಲಿಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ವಿಜ್ಞಾನಿಗಳು ಜಂಟಿ ಅಧ್ಯಯನ ನಡೆಸಿ ವರದಿ ಪ್ರಕಟಿಸಿದ್ದಾರೆ.
5000 ಔಷಧ ಕಂಪನಿಗಳ 9000 ಸ್ಟಾಕಿಸ್ಟ್ ಗಳಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಆದರೆ ಸರ್ಕಾರಿ ಔಷಧ ಅಂಗಡಿಗಳು/ಆಸ್ಪತ್ರೆಗಳ ಅಂಕಿ-ಅಂಶ ಇದರಲ್ಲಿಲ್ಲ. ಆದರೆ ದೇಶದಲ್ಲಿ ಬಳಕೆಯಾಗುವ ಒಟ್ಟಾರೆ ಔಷಧಿಯಲ್ಲಿ ಖಾಸಗಿ ವಲಯದ ಪಾಲೇ ಶೇ.80-90ರಷ್ಟು ಇರುವ ಕಾರಣ, ವರದಿ ಮಹತ್ವ ಪಡೆದುಕೊಂಡಿದೆ.
Leave a Comment