ಶಿರಸಿ: ಬೇರೆಯವನನ್ನು ವಿವಾಹವಾದ ಸ್ತ್ರೀಯನ್ನು ಆಕೆಯ ಹಳೆಯ ಪ್ರೇಮಿ ಈಗಲೂ ಪ್ರೀತಿಸುತ್ತಿರುವ ವಿಷಯಕ್ಕೆ ಸಂಬಂಧಿಸಿ ಮನಸ್ತಾಪವಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಳಿದ್ದಕ್ಕೆ ಆ ಪ್ರೇಮಿ ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಬನವಾಸಿಯಲ್ಲಿ ಶುಕ್ರವಾರ ನಡೆದಿದೆ.
ಮನ್ಸೂರ್ ಅಬ್ದುಲ್ ಕರೀಂ ಶೇಕ್ ಹಲ್ಲೆ ನಡೆಸಿದ ವ್ಯಕ್ತಿ. ವಿವಾಹಿತೆಯ ಸಹೋದರರಾದ ನದೀಂ ಮತ್ತು ಇಬ್ರಾಹಿಂ ಗಾಯಗೊಂಡಿದ್ದಾರೆ. ಆ ಮಹಿಳೆಯ ವಿವಾಹ ಆದ ಬಳಿಕವೂ ಮನ್ಸೂರ್ ಆಕೆಯೊಂದಿಗೆ ಪ್ರೀತಿ ಹೊಂದಿದ್ದ. ಈ ವಿಷಯಕ್ಕೆ ಸಂಬಂಧಿಸಿ ಹಲವು ಬಾರಿ ಮಾತಿನ ಚಕಮಕಿ ಆಗಿತ್ತು.
ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸುವ ಸಲುವಾಗಿ ಬನವಾಸಿಯ ಅಹಲೆ ಸುನ್ನತ್ ಜಮಾತ್ ಕಾರ್ಯದರ್ಶಿ ಅಷ್ಟಾಕ್ ಅಲಿ ಮನೆಯಲ್ಲಿ ಸಭೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸೇರಿದ್ದ ಜಮಾತಿನ ಮುಂದೆಯೇ ನದೀಂ ಮತ್ತು ಮನ್ಸೂರ್ ನಡುವೆ ಮಾತಿಗೆ ಮಾತು ಬೆಳೆದಿದೆ.
ಈ ವೇಳೆ ಮನ್ಸೂರ್ ಇಬ್ರಾಹಿಂನು ನದೀಂಗೆ ಗುದ್ದಿ ಹಲ್ಲೆ ನಡೆಸಿದ್ದಾನಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಕೈ ಮತ್ತು ಭುಜಕ್ಕೆ ಹಲವಾರು ಬಾರಿ ಚುಚ್ಚಿದ್ದಾನೆಂದು ಆರೋಪಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment