ಬೆಂಗಳೂರು: ನೆರೆಯ ದೇಶ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶಿಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪ್ರಸ್ತುತ ನಮ್ಮ ದೇಶದಿಂದ ಭೂತಾನ್ ದೇಶಕ್ಕೆ ಸಂಸ್ಕರಿತ ಅಡಕೆ ಉತ್ಪನ್ನಗಳು ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದ್ದು, ಭೂತಾನ್ನಿಂದ ಕೇವಲ ಹಸಿ ಅಡಕೆ ಆಮದಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ನೆರೆಯ ಭೂತಾನ್ ದೇಶವು ಭಾರತದ ಪರಂಪರಾಗತ ಮಿತ್ರ ದೇಶವಾಗಿದ್ದು, ಉಭಯ ದೇಶಗಳ ನಡುವೆ ಉತ್ತಮ ವಾಣಿಜ್ಯ ವಹಿವಾಟು ನಡೆಸಲಾಗುತ್ತಿದೆ.
ಅಡಕೆ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು, ಕೇಂದ್ರ ಸರಕಾರದ ಜತೆಗೆ ಸತತ ಸಂಪರ್ಕದಲ್ಲಿದ್ದು, ಭೂತಾನ್ ಅಡಕೆ ಆಮದು ವಿಚಾರವಾಗಿಯೂ ಮಾತುಕತೆ ನಡೆಸಲಾಗುವುದು. ಬೆಳೆಗಾರರಿಗೆ, ಯಾವುದೇ ಗೊಂದಲ, ಆತಂಕ ಬೇಡ ಎಂದು ಭರಸವೆ ನೀಡಿದ್ದಾರೆ. ಈ ವಿಚಾರದ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿ ಕೊಡಲು ಲೋಕಸಭಾ ಸದಸ್ಯರ ನೇತೃತ್ವದಲ್ಲಿ ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದಿದ್ದಾರೆ.
Leave a Comment