ಹಳಿಯಾಳ : ಹಳಿಯಾಳದ ಇ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವಿಚಾರದಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕಾರ್ಖಾನೆ ಹಾಗೂ ರೈತರ ಸಮ್ಮುಖದಲ್ಲಿ ಚರ್ಚಿಸಿ, ಈ ಸಾಲಿನಲ್ಲಿ ಎಫ್ ಆರ್ ಪಿ ದರವನ್ನು ರೂ.2592 ಕ್ಕಿಂತ ಹೆಚ್ಚಿಸಿ ಬಡ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಶುಕ್ರವಾರ ಬೆಂಗಳೂರಿನಲ್ಲಿ ಸಕ್ಕರೆ ಸಚಿವ ಶಂಕರಪಾಟಿಲ ಮುನೆನಕೊಪ್ಪ ಅವರಿಗೆ ಹಳಿಯಾಳ ಮಾಜಿ ಶಾಸಕ ಸುನೀಲ ಹೆಗಡೆ ಮನವಿ ಮಾಡಿದ್ದಾರೆ.
ಈ ಕುರಿತು ಹಳಿಯಾಳ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಸಚಿವರೊಂದಿಗೆ ಈ ಬಗ್ಗೆ ಮಾತನಾಡಿದ್ದು, ಹಳಿಯಾಳ ಪ್ಯಾರಿ ಕಾರ್ಖಾನೆಯ ಅಧಿಕಾರಿಗಳು, ರೈತ ಮುಖಂಡರು ನಮ್ಮನ್ನೊಳಗೊಂಡ ಒಂದು ನಿಯೋಗಕ್ಕೆ ಧಾರವಾಡಕ್ಕೆ ಬರುವಂತೆ ಅವರು ಆಹ್ವಾನಿಸಿದ್ದಾರೆ. ಧಾರವಾಡದಲ್ಲಿ ಈ ಬಗ್ಗೆ ಸಭೆ ಸೇರಿ ರೈತರಿಗೆ ನ್ಯಾಯಯುತವಾಗಿ ಈಡೇರಬೇಕಾದ ಬೇಡಿಕೆಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ರೈತರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆಂದು ಹೆಗಡೆ ತಿಳಿಸಿದರು.
ಹಳಿಯಾಳದ ಈಐಡಿ ಪ್ಯಾರಿ ಶುಗರ್ಸ್ ಪ್ರೈಲಿ ಈ ಕಾರ್ಖಾನೆಯು ಕಳೆದ ವರ್ಷ 13 ಲಕ್ಷ ಟನ್ ಕಬ್ಬು ನುರಿಸಿದ್ದು, ಕಳೆದ ಸಾಲಿನಲ್ಲಿ ಎಫ್ ಆರ್ ಪಿ ದರ ರೂ.2592 ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ ನಿಗದಿಯಾಗಿತ್ತು, ಆದರೆ ಈ ವರ್ಷ ಎಫ್ ಆರ್ ಪಿ ದರವನ್ನು 2371 ರೂ. (ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ) ನಿಗಧಿ ಮಾಡಿದ್ದಾರೆ.
ಆದರೆ ರಸಗೊಬ್ಬರ ದರ ಒಂದು ಚೀಲಕ್ಕೆ ರೂ.1600 ಏರಿಕೆಯಾಗಿದ್ದು, ಕೂಲಿ ಕಾರ್ಮಿಕರ ವೇತನವು ಸಹ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಎಫ್ ಆರ್ ಫಿ ದರ ಕಡಿಮೆ ನಿಗದಿಯಾಗಿರುವುದರಿಂದ ರೈತರಿಗೆ ಬಹಳ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ಉಂಟಾಗಲಿದೆ. ಅಲ್ಲದೇ ಪ್ರಮುಖವಾಗಿ ಕುಟುಂಬ ನಿರ್ವಹಣೆ ದುಸ್ತರವಾಗಲಿದೆ.
ಬೆಳೆ ಸಾಲ ತೀರಿಸಲು ಆಗದೆ ಸಂಕಷ್ಟಕ್ಕೆ ರೈತ ಒಳಗಾಗಲಿದ್ದಾನೆ.
ಈ ಎಲ್ಲ ಕಾರಣಗಳಿಂದ ರೈತರು ಹಳಿಯಾಳ ತಾಲೂಕಿನಲ್ಲಿ ಕಳೆದ ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಕಾರಣ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ರೈತರ ಬೆಂಬಲಕ್ಕೆ ನಿಂತು ರೈತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮಾಜಿ ಶಾಸಕ ಸುನೀಲ ಹೆಗಡೆ ಮನವಿ ಮಾಡಿದ್ದಾರೆ.
ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ
07-10-2022
Leave a Comment