ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮದ ಎಸ್.ಕೆ.ಪಿ ಕ್ರೀಡಾಂಗಣದ ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದ ಈರ್ವರಿಗೆ ಚಿರತೆ ಯೊಂದು ಗಾಯಗೊಳಿಸಿದ ಘಟನೆ ಸಂಭವಿಸಿದೆ.
ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಹಾಡಗೇರಿ ನಿವಾಸಿಗಳಾದ ಈರ್ವರು, ಸಾಲ್ಕೋಡ ಭಾಗದಿಂದ ಅರೆಅಂಗಡಿಗೆ ದ್ವಿಚಕ್ರ ವಾಹನದಲ್ಲಿ ಸಾಗುವಾಗ ಈ ಘಟನೆ ಸಂಭವಿಸಿದೆ. ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಮರ ಇರುವ ಪ್ರದೇಶದಿಂದ ನುಗ್ಗಿದ ಚಿರತೆಯೊಂದು ಏಕಾಏಕಿ ಬೈಕ್ ಮೇಲೆ ಎಗರಿದೆ. ಈ ಸಂದರ್ಭದಲ್ಲಿ ಈರ್ವರ ಕಾಲಿನ ಭಾಗಕ್ಕೆ ಉಗುರಿನಿಂದ ತಗುಲಿದ ಗಾಯ ಸಂಭವಿಸಿದ್ದು, ಅರೇಅಂಗಡಿಯಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ.
ಎರಡು ದಿನದ ಹಿಂದೆ ಇದೇ ಗ್ರಾಮದ ಬಾವಿಯಲ್ಲಿ ಚಿರತೆ ಬಿದ್ದಿದ್ದು. ಉರಗತಜ್ಞರ ಸಹಕಾರದ ಮೇರೆಗೆ ಅರಣ್ಯ ಇಲಾಖೆಯವರು ಬೋನಿನಲ್ಲಿ ಚಿರತೆ ಸೆರೆಹಿಡಿದು ಬಿಟ್ಟಿದ್ದರು.
ಇದರಿಂದ ಸ್ಥಳೀಯರು ನಿಟ್ಟುಸಿರು ಬಿಡುವಾಗಲೇ ಮತ್ತೆ ಇಂತಹ ಘಟನೆ ಸಂಭವಿಸಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಚಿರತೆಯ ಕಾಟವನ್ನು ದೂರ ಮಾಡುವ ಮೂಲಕ ಸ್ಥಳೀಯರ ಆತಂಕ ದೂರ ಮಾಡಬೇಕಿದೆ.
Leave a Comment