ಕೃಷಿ ಜಮೀನು ಪರಿವರ್ತನೆಗೆ ಅವಕಾಶ
ಬೆಂಗಳೂರು: ಕರ್ನಾಟಕ ಭೂ-ಕಂದಾಯ ಕಾಯಿದೆಯ
ಸೆಕ್ಷನ್ 95ಕ್ಕೆ ತಿದ್ದುಪಡಿ ತಂದು ಸ್ವಯಂ ಘೋಷಣೆಯ ಮೂಲಕ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಂದಾಯ ಇಲಾಖೆ ವಿಚಾರವಾಗಿ ಮುಖ್ಯಮಂತ್ರಿ ತಮ್ಮ ಬಜೆಟ್ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿ, ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಸರಳವಾಗಿ, ನೇರವಾಗಿ ಮತ್ತು ಸಕಾಲದಲ್ಲಿ ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನನ್ನು ಪುನರ್ ಸ್ಥಾಪಿಸುವುದಕ್ಕಾಗಿ ಮನವಿ ಸಲ್ಲಿಸಲು ಕಾಲಮಿತಿಯನ್ನು ಕಾಯ್ದೆಯಲ್ಲಿಯೇ ನಿಗದಿಪಡಿಸಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ (ಕಖಿಅಐ), 1978ಕ್ಕೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಜಿಲ್ಲಾಡಳಿತ ಕಚೇರಿ ಸಂಕೀರ್ಣ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ, ರಾಯಚೂರು, ಉತ್ತರ ಕನ್ನಡ, ಚಿತ್ರದುರ್ಗ, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಗತಿಯಲ್ಲಿರುವ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.
ಅಲ್ಲದೆ, ತಾಲೂಕು ಮಟ್ಟದ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ತಾಲ್ಲೂಕು ಆಡಳಿತ ಸೌಧಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರಗತಿಯಲ್ಲಿರುವ 25 ತಾಲೂಕು ಆಡಳಿತ ಸೌಧ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಉದ್ಯಮ ಶಕ್ತಿ ಎಂಬ ಯೋಜನೆಯಡಿ 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸಿ, ಅವುಗಳನ್ನು ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಪೆಟ್ರೋಲಿಯಂ ಕಂಪನಿಗಳು ಬಂಡವಾಳ ಹೂಡಲಿವೆ. ರಾಜ್ಯ ಸರ್ಕಾರವು ಪೆಟ್ರೋಲ್ ಬಂಕ್ ಸ್ಥಾಪನೆಗೆ ಭೂಮಿ ನೀಡುತ್ತದೆ ಹಾಗೂ ತರಬೇತಿ, ಪರವಾನಗಿ, ಮತ್ತಿತರ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ಪ್ರವಾಹ, ಅನಾವೃಷ್ಟಿ, ನದಿ ತೀರದ ಸವೆತದಿಂದ ಉಂಟಾಗುವ ಪರಿಣಾಮಗಳನ್ನು ಪರಿಹರಿಸಲು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ 422 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.
Leave a Comment