ಹೊನ್ನಾವರ:
ಹೊನ್ನಾವರ ತಾಲೂಕಿನ ಗುಣವಂತೆಯ ನೆಲವಂಕಿ ಗ್ರಾಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ 10 ಗೋವುಗಳನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ತುಂಬುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಾಹನ ಸಮೇತ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಭಟ್ಕಳ ತಾಲೂಕಿನ ವೆಂಕಟಾಪುರ ನಿವಾಸಿ ಇಬ್ರಾಹಿಂ ಮಹ್ಮದ್ ಗಜರಲಿ ಹಾಗೂ ಕಾಸರಕೋಡ ಅಪ್ಸರಕೊಂಡದ ನಿವಾಸಿ ಮಂಜುನಾಥ ಅನುರಾಜ ಗೌಡ ಗೋವುಗಳನ್ನು ಕದ್ದು, ವಾಹನದಲ್ಲಿ ತುಂಬಿಕೊಂಡು ಮಾರಾಟ ಮಾಡಲು ಯತ್ನಿಸಿದ ಆರೋಪಿಗಳು. ಇವರು ಮಂಗಳವಾರ ರಾತ್ರಿ ನೆಲವಂಕಿ ಗ್ರಾಮಸ್ಥರ 10 ಗೋವುಗಳನ್ನು ತಮ್ಮ ವಾಹನದಲ್ಲಿ ತುಂಬುತ್ತಿರುವ ದೃಶ್ಯ ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಅಲ್ಲಿಯ ಸಮೀಪದ ಮನೆಯೊಂದರಲ್ಲಿ ವಿಶೇಷ ಔತಣಕೂಟ ಏರ್ಪಡಿಸಿದ್ದರಿಂದ ಆ ಪ್ರದೇಶಕ್ಕೆ ಜನರು ನಿರಂತರವಾಗಿ ಆಗಮಿಸುತ್ತಲೇ ಇದ್ದರು. ಆ ಸಂದರ್ಭದಲ್ಲಿ ಸ್ಥಳೀಯರೊಬ್ಬರಿಗೆ ದನಗಳ್ಳರು ಇರಬಹುದೆಂಬ ಶಂಕೆ ವ್ಯಕ್ತವಾಗಿ ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ದನಗಳ್ಳರನ್ನು ಸೂಕ್ಷ್ಮವಾಗಿ ಹಿಡಿಯಲು ಸಾಹಸ ಮೆರೆದಿದ್ದಾರೆ. ಕೆಲವರು ಹಿಂಡಿನ ಪೊದೆಯಲ್ಲಿ ಅಡಗಿ ಕುಳಿತು ದನಗಳ್ಳರ ಬಗ್ಗೆ ಖಾತ್ರಿಪಡಿಸಿಕೊಂಡು ವಾಹನ ಚಾಲಕ ಇಬ್ರಾಹಿಂ ಮಹ್ಮದ್ ಗಜರಲಿ ಹಾಗೂ ದನಗಳ್ಳತನ ಮಾಡಲು ಶಾಮಿಲಾಗಿರುವ ಸ್ಥಳೀಯ ಮಂಜುನಾಥ ಗೌಡ ಇಬ್ಬರನ್ನು ಹಿಡಿದು ಧರ್ಮದೇಟು ನೀಡಿ ನಂತರ ಗೋವುಗಳನ್ನು ಹಾಗೂ ವಾಹನ ಸಮೇತ ಆರೋಪಿಗಳನ್ನು ಮಂಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಹೊನ್ನಾವರ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
-gaju
Leave a Comment