ಕಾರವಾರ:
ಹೆಸ್ಕಾಂ ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ದ್ವೈಮಾಸಿಕ ಗ್ರಾಹಕರ ಸಂವಾದ ಸಭೆಯಲ್ಲಿ ಹಲವರು ವಿದ್ಯುತ್‍ನಿಂದಾಗುವ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳ ಬಗ್ಗೆ ಸೋಮವಾರ ಮನವಿ ಸಲ್ಲಿಸಿದರು.
ಸದಾಶಿವಗಡದಲ್ಲಿ ವಿದ್ಯುತ್ ಉಪ ವಿಭಾಗದ ಕಚೇರಿ ತೆರೆಯುವಂತೆ ಕಳೆದ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ಅಲ್ಲದೆ ಈ ಬಗ್ಗೆ ಶಾಸಕರಿಗೂ ಕೂಡ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಈ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ತೊಂದರೆಯಾಗುತ್ತಿದೆ ಎಂದು ನಗರಸಭೆ ಸದಸ್ಯ ಪ್ರದೀಪ ಗುನಗಿ ಸೇರಿದಂತೆ ಇತರರು ಹೆಸ್ಕಾಂ ಅಧಿಕಾರಿಗಳ ಬಳಿ ದೂರಿದರು.
ಚೆಂಡಿಯಾ ಗ್ರಾ.ಪಂ ಸದಸ್ಯ ಮೈಕಲ್ ಡಿಕೋಸ್ಟಾ ಅವರು ಚೆಂಡಿಯಾದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಅಳವಡಿಸಿದ್ದ ಕಂಬಗಳು ಸಂಪೂರ್ಣ ದುರಸ್ಥಿಗೆ ಬಂದಿದ್ದು, ಬಿಳ್ಳುವ ಸ್ಥಿತಿಯಲ್ಲಿದೆ. ಅಲ್ಲದೆ ತಂತಿಗಳು ಕೂಡ ಆಗಾಗ ತುಂಡಾಗಿ ಬಿಳ್ಳುತ್ತಿದ್ದು, ಮಳೆಗಾಲದಲ್ಲಿ ಇದರಿಂದ ಹೆಚ್ಚಿನ ಅಪಾಯ ಇದೆ. ಆದ್ದರಿಂದ ಮಳೆಗಾಲ ಪೂರ್ವದಲ್ಲಿ ಇದನ್ನು ಬದಲಾಯಿಸಬೇಕು. ಜತೆಗೆ ಕಾರವಾರ-ಬಿಣಗಾದಲ್ಲಿರುವಂತೆ ಚೆಂಡಿಯಾ ಸುತ್ತಮುತ್ತಲಿನ ಭಾಗಗಳಲ್ಲಿಯೂ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಹಕರ ಸಂವಾದ ಸಭೆಯಲ್ಲಿ ಭಾಗವಹಿಸಿದ್ದ ಹೆಸ್ಕಾಂ ಮುಖ್ಯ ಕಚೇರಿಯ ರಾಮಕೃಷ್ಣ ಭಟ್ಟ ಮಾತನಾಡಿ, ವಿದ್ಯುತ್ ಸಮಸ್ಯೆಗಳ ಬಗ್ಗೆ ಸ್ವೀಕರಿಸಿದ ದೂರುಗಳು ಆದಷ್ಟು ಶೀಘ್ರದಲ್ಲಿ ಬಗೆಹರಿಸಲು ಪ್ರಯತ್ನಿಸಲಾಗುವುದು. ಮಳೆಗಾಲ ಸಿದ್ದತೆಯಾಗಿ ಈಗಾಗಲೇ ಕೆಲ ಪ್ರದೇಶಗಳಲ್ಲಿ ಲೈನ್ ಕ್ಲಿಯರ್ ಮಾಡಲಾಗುತ್ತಿದೆ. ಕಂಬಗಳನ್ನು ಬದಲಾಯಿಸಲಾಗುತ್ತದೆ. ಈಗ ಕೆಲ ದೂರುಗಳು ಬಂದಿದ್ದು ಆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಇದೆ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಕೆಲ ಗ್ರಾಹಕರು ಹೆಸ್ಕಾ ಅಧಿಕಾರಿಗಳು ಸಭೆಗಳನ್ನು ಕಾಟಾಚಾರಕ್ಕೆ ಮಾಡುತ್ತಾರೆ. ಪ್ರತಿ ವರ್ಷ ಈ ರಿತಿ ಸಭೆ ಮಾಡಿ ಗ್ರಾಹಕರಿಂದ ದೂರು ಸ್ವೀಕರಿಸುತ್ತಿದ್ದರಾದರೂ ಅದನ್ನು ಕಾರ್ಯಗತಗೊಳಿಸುವುದಿಲ್ಲ. ನಾವು ಈ ಹಿಂದೆ ಸಲ್ಲಿಸಿದ ಸಮಸ್ಯೆಗಳು ಇವರೆಗೂ ಬಗೆಹರಿದಿಲ್ಲ. ಪ್ರತಿ ಭಾರಿ ಸಭೆಯಲ್ಲಿ ತಿಳಿಸಿದಾಗ ಸಮಸ್ಯೆಯನ್ನೂ ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡುತ್ತಾರೆ. ಬಳಿಕ ಸಮಸ್ಯೆಇರುವ ಕಡೆ ಮುಖ ಕೂಡ ಹಾಕುವುದಿಲ್ಲ ಎಂದು ದೂರಿದರು. ಹೆಸ್ಕಾಂ ವಿಭಾಗದ ಗುರುದಾಸ ಈಡೂರಕರ್, ನರಸಿಂಹ ಮೂರ್ತಿ ಇದ್ದರು.
Leave a Comment