ಹಳಿಯಾಳ: ಪ್ರಸ್ತುತ ಸಮಾಜದಲ್ಲಿ ಜನರ ನೈತಿಕ ಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಅದರೊಂದಿಗೆ ಮಾನವಿಯ ಮೌಲ್ಯಗಳು ಸಹ ಇಳಿಮುಖವಾಗುತ್ತಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರು ಹಾಗೂ ಹಿರಿಯ ಸಾಹಿತಿ ಗೋರೂರು ಚನ್ನಬಸಪ್ಪ ವಿಷಾಧ ವ್ಯಕ್ತಪಡಿಸಿದರು.
ಪಟ್ಟಣದ ವಿರಕ್ತಮಠದಲ್ಲಿ ಶರಣ ಸಾಹಿತ್ಯ ಜಿಲ್ಲಾ ಘಟಕ, ಅಖಿಲ ಭಾರತ ವೀರಶೈವ ಮಹಾಸಭಾ, ಅಕ್ಕನ ಬಳಗ, ಮಹಿಳಾ ಮತ್ತು ಪ್ರಗತಿಪರ ಯುವಜನ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧಾರ್ಮಿಕ ಚಿಂತನೆಗಳ ಮೂಲಕ ಇಂದಿನ ಸಮಾಜವು ಅಭಿವೃದ್ದಿ ಸಾಧಿಸಲು ಸಾಧ್ಯವಾಗಿದೆ. ಇಂದಿನ ಜನಾಂಗಕ್ಕೆ ಟಿವಿ ಬದಲು ವಚನ ಸಾಹಿತ್ಯದ ಅವಶ್ಯಕತೆಯಿದ್ದು ಅದನ್ನು ಪಡೆಯಲು ಜನರು ಮುಂದಾಗಬೇಕು, ಸಾಹಿತ್ಯ ಎಲ್ಲಾ ರೀತಿಯ ಮೌಲ್ಯಗಳ ಶಿಕ್ಷಣ ನೀಡುತ್ತದೆ, ಮೂಢ ನಂಬಿಕೆಗಳು ಮನುಷ್ಯನ ಜೀವನನ್ನು ಹದಗೆಡಿಸುತ್ತಿವೆ. ಇಂದಿನ 21ನೇ ಶತಮಾನದ ಕಂಪ್ಯೂಟರ ಯುಗದಲ್ಲಿಯೂ ಸಹ ಮೂಡನಂಬಿಕೆಗಳು ಆಚರಣೆಯಲ್ಲಿರುವುದು ಜನರ ಅಜ್ಞಾನವನ್ನು ಬಿಂಬಿಸುತ್ತವೆ ಎಂದು ಹೇಳಿದರು.
ಸಮಾಜದ ಜೀವನ ಮತ್ತು ಅಭಿರುಚಿಗಳೆರಡು ಬದಲಾವಣೆ ಆಗುವುದು ಅವಶ್ಯವಾಗಿದೆ. ಆಗ ಮಾತ್ರ ಸಮಾಜವು ಅಭಿವೃದ್ದಿಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದ ಅವರು, ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಸಹಿಸುವುದು ಸಹ ದ್ರೋಹ ಎಸಗಿದಂತೆ ಆಗಿದೆ. ಅನ್ಯಾಯವಾದಾಗ ಸೆಟೆದು ನಿಂತ ನ್ಯಾಯಕ್ಕಾಗಿ ಹೋರಾಟ ನಡೆಸುವುದು ಧರ್ಮವಾಗಿದೆ. ಇಂದಿನ ರಾಜಕೀಯವು ಸಂಪೂರ್ಣವಾಗಿ ದಾರಿ ತಪ್ಪಿದ್ದು ಅದನ್ನು ಸರಿದಾರಿಗೆ ತರಲು ಪ್ರಜೆಗಳು ಪ್ರಯತ್ನಿಸಬೇಕು. 12ನೇ ಶತಮಾನದಲ್ಲಿ ಆದ ಸಾಮಾಜಿಕ ಕ್ರಾಂತಿಯು ಇಂದಿನ ಅಗತ್ಯವಾಗಿದೆ. ಅದನ್ನು ಮಾಡಲು ಎಲ್ಲರೂ ವಚನ ಸಾಹಿತ್ಯವನ್ನು ಓದಿ ಅದನ್ನು ಅರಿಯಬೇಕಾಗಿದೆ. ದೇಶದ ಅಭಿವೃದ್ದಿಗಾಗಿ ಜನಪ್ರತಿನಿಗಳನ್ನು ಚುನಾಯಿಸಿಲಾಗುತ್ತಿದೆ ಆದರೆ ಅವರು ತಮ್ಮ ಜವಾದ್ದಾರಿಗಳನ್ನು ಮರೆತು ಸಂಪತ್ತು ಸಂಗ್ರಹದಲ್ಲಿ ತೊಡಗಿರುವುದು ದೇಶದ ಪ್ರಗತಿಗೆ ಮಾರಕವಾಗಿದೆ. ಪ್ರಜಾಪ್ರಭುತ್ವ ನೈಜವಾದ ರೀತಿಯಲ್ಲಿ ಮುನ್ನಡೆಯಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅಗಷ್ಟ 29 ರಂದು ವಚನ ದಿನವನ್ನಾಗಿ ರಾಜ್ಯಾದಂತ ಆಚರಿಸಲು ನಿರ್ಧರಿಸಲಾಗಿದೆ. ವಚನಗಳು ಇಂದಿನ ಅಗತ್ಯವಾಗಿದೆ. ಅದರ ಮಹತ್ವವನ್ನು ಮುಂದಿನ ಜನಾಂಗಕ್ಕೂ ವರ್ಗಾಯಿಸಬೇಕಾಗ ಜವಾದ್ದಾರಿಯ ಎಲ್ಲರ ಮೇಲಿದೆ. ಪಾಲಕರು ಸಹ ವಚನ ಸಾಹಿತ್ಯವನ್ನು ಓದುವುದರ ಜೊತೆಗೆ ಅವುಗಳ ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ವರ್ಗಾಯಿಸಬೇಕಾಗಿದೆ. ಶರಣ ಸಾಹಿತ್ಯ ಎಲ್ಲಾ ಸಾಹಿತ್ಯಗಳಿಗಿಂತ ಪ್ರಾಮುಖ್ಯತೆಯನ್ನು ಹೊಂದಿದ್ದು ಜನರು ಪ್ರಾಮಾಣಿಕ ಜೀವನ ಶೈಲಿ ಅಳವಡಿಸಲು ಸಹಾಯಕಾರಿಯಾಗಿದೆ ಎಂದರು.
ಶರಣ ಸಾಹಿತ್ಯ ಪರಿಷತನ ರಾಜ್ಯಾಧ್ಯಕ್ಷ ಡಾ, ಬಸವರಾಜ ಸಾದರ ಅವರು ಮಾತನಾಡಿ, 12ನೇ ಶತಮಾನದ ವಚನ ಸಾಹಿತ್ಯವು ಇಂದಿಗೂ ಬೇಕಾಗಿದೆ. ಅದರ ಮೂಲಕವೇ ಇಂದಿನ ಸಂವಿಧಾನ, ಕಾನೂನು ಮತ್ತು ಕಟ್ಟಡೆಗಳನ್ನು ರೂಪಿಸಲಾಗಿದೆ . ಶರಣ ಸಾಹಿತ್ಯವು ಇಂದಿಗೂ ಸಮಾನತೆಯ ಜೊತೆಗೆ ಸಹೋದರತ್ವವನ್ನು ಸಾರುವುದರ ಮೂಲಕ ಜೀವಂತವಾಗಿದೆ. ಸಮಾಜದ ಅಭಿವೃದ್ದಿಗೆ ವಚನಗಳ ಮೂಲಕ ಸರಳ ರೀತಿಯಲ್ಲಿ ಅಂದಿನ ಶರಣರು ನೀಡಿದ ಕೂಡುಗೆ ಶಾಶ್ವತವಾಗಿದೆ ಎಂದರು.
ಸಮಾರಂಭದಲ್ಲಿ ಶರಣ ಸಾಹಿತ ಉಕ ಜಿಲ್ಲೆಯ ಅಧ್ಯಕ್ಷ ಶಿವುದೇವ ದೇಸಾಯಿಸ್ವಾಮಿ, ಶ್ರೀಕಾಂತ ಹೂಲಿ, ಎಮ್.ಎನ್ ತಳವಾರ, ಎಮ್.ಬಿ. ತೊರಣಗಟ್ಟಿ, ಮಹಾಂತೇಶ ಹಿರೇಮಠ, ಯುವ ಘಟಕದ ಮಹಾಂತೇಶ ಬೆಂಡಿಗೇರಿಮಠ, ಅಪ್ಪು ಚರಂತಿಮಠ, ಲಿಂಗರಾಜ ಹಿರೇಮಠ, ಡಾ. ಸಿ.ಎಸ್. ಓಶೀಮಠ, ಡಾ. ಟಿ.ಸಿ. ಮಲ್ಲಾಪೂರಮಠ, ಶಾರದಾ ಕಿತ್ತೂರ ಮತ್ತು ಉಮಾ ಬೋಳಶೆಟ್ಟಿ ಇದ್ದರು.
Leave a Comment