ಹಳಿಯಾಳ:
ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಗಳಂದು ರಾಷ್ಟ್ರಧ್ವಜಕ್ಕೆ ಅಪಚಾರವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಆಗ್ರಹಿಸಿರುವ ಹಿಂದೂ ಜನಜಾಗೃತಿ ಸಮಿತಿಯವರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಹಳಿಯಾಳ ತಹಶೀಲ್ದಾರ್ ಹಾಗೂ ಪೋಲಿಸ್ ಇಲಾಖೆಗೆ ಸಲ್ಲಿಸಿದರು.
ಇಲ್ಲಿಯ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ ಹಿಂ.ಜ. ಸಂಘಟನೆಯವರು ಪ್ಲಾಸ್ಟಿಕ ಧ್ವಜಗಳ ಮಾರಾಟಕ್ಕೆ ನಿರ್ಬಂಧ ಹೇರಬೇಕು, ರಾಷ್ಟ್ರಧ್ಬಜಗಳಿಗೆ ಆಗುವ ಅಪಚಾರ ತಡೆಯಬೇಕು ಎಂದು ಆಗ್ರಹಿಸಿ ಬರೆದ ಮನವಿ ಪತ್ರವನ್ನು ತಹಶೀಲ್ದಾರ್, ಪೋಲಿಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಶಾಲಾ ಕಾಲೇಜುಗಳಿಗೂ ಸಲ್ಲಿಸಿದರು.
ಮನವಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಗಳನ್ನು ಅದ್ಧೂರಿಯಿಂದ ಆಚರಿಸಲು ಅತ್ಯುತ್ಸಾಹದಿಂದ ರಾಷ್ಟ್ರಾದ್ಯಂತ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ಇಂತಹ ರಾಷ್ಟ್ರೀಯ ದಿನಗಳನ್ನು ಆಚರಿಸುವಾಗ ಕಾಗದ ಮತ್ತು ಪ್ಲಾಸ್ಟಿಕ್‍ಗಳಿಂದ ತಯಾರಿಸುವ ಧ್ವಜಗಳ ಮೂಲಕ ರಾಷ್ಟ್ರದ ತ್ರಿವರ್ಣ ಧ್ವಜಕ್ಕೆ ಅಪಚಾರವಾಗುವುದನ್ನು ನಾಗರಿಕರು ತಡೆಯಬೇಕಿದೆ. ರಾಷ್ಟ್ರಧ್ವಜವನ್ನು ಅರಳಿಸುವ ಸಂದರ್ಭದಲ್ಲಿ ಮಕ್ಕಳಿಗೆ ವಿತರಿಸುವ ಕಾಗದದ ಮತ್ತು ಪ್ಲಾಸ್ಟಿಕ್ ಧ್ವಜಗಳು ಕಾರ್ಯಕ್ರಮದ ಬಳಿಕ ಹರಿದ ಸ್ಥಿತಿಯಲ್ಲಿ ಸಾರ್ವಜನಿಕ ರಸ್ತೆ, ಚರಂಡಿಗಳಲ್ಲಿ ಅನಾಥವಾಗಿ ಬಿದ್ದಿರುವುದನ್ನು ನೋಡಬೇಕಾಗಿರುವುದು ಅತ್ಯಂತ ಖೇದಕರವಾಗಿದ್ದು ಇದನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಗೌರವವನ್ನು ಕಾಪಾಡುವ ಬಗ್ಗೆ ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳಬೇಕೆಂದು ಸಮಿತಿಯು ಸರಕಾರವನ್ನು ವಿನಂತಿಸುವುದರೊಂದಿಗೆ ರಾಷ್ಟ್ರಧ್ವಜದ ಅವಮಾನವನ್ನು ತಡೆಗಟ್ಟುವ ಈ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ನಾಗರಿಕರನ್ನು ಕೋರಲಾಗಿದೆ.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ತಾಲೂಕಾ ಸಮನ್ವಯಕ ವಿಠೋಬಾ ಮಾಳ್ಸೇಕರ, ಅಭಿ ಮಸೂರಕರ, ವಿನೋದ ಗಿಂಡೆ, ಪದ್ಮಾ ಧೂಳಿ, ಕಾಂಚನಾ ರಕಪೂತ ಇದ್ದರು.
Leave a Comment