• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅನಂತಕುಮಾರ ಹೆಗಡೆ ನಡೆದು ಬಂದ ದಾರಿ

September 4, 2017 by Sachin Hegde 3 Comments

 ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಆಳ್ವಿಕೆ ನಡೆಸಿದ್ದಾರೆ. ದಿನಕರ ದೇಸಾಯಿ ಕೂಡ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಜೋಕಿಂ ಆಳ್ವ, ದೇವರಾಯ ನಾಯ್ಕ, ಮಾರ್ಗರೇಟ್ ಆಳ್ವ ಮೊದಲಾದವರು ಸಂಸದರಾಗಿ ಕೆಲಸ ಮಾಡಿದ್ದಾರೆ. ಅನೇಕ ರಾಜಕೀಯ ಮುತ್ಸದ್ದಿಗಳು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆದರೆ ಯಾರಿಗೂ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಹೀಗಿರುವಾಗ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಂಸತ್ ಪ್ರವೇಶಿಸಿ ಕೆನರಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಅನಂತಕುಮಾರ ಹೆಗಡೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಪಡೆದಿರುವ ಅನಂತಕುಮಾರ ಹೆಗಡೆ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಐದು ಬಾರಿ ಸಂಸದರಾದವರು. 1994ರಲ್ಲಿನ ಬಿಗುವಿನ ವಾತಾವರಣದ ಮದ್ಯೆಯೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸುವದರ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ಅನಂತಕುಮಾರ ಹೆಗಡೆ, ಹಿಂದುತ್ವದ ಬೆಸುಗೆಯಲ್ಲಿಯೇ ಜನಪ್ರತಿನಿಧಿಯಾದರು. ಆರ್.ಎಸ್.ಎಸ್ ಹಾಗೂ ಹಿಂದು ಜಾಗರಣಾ ಸಮಿತಿಯಲ್ಲಿ ಗುರುತಿಸಿಕೊಂಡಿದ್ದ 1990ರ ದಶಕದಲ್ಲಿ ಹಿಂದು ಜಾಗರಣಾ ವೇದಿಕೆಯ ಕೊಡಗು ಜಿಲ್ಲೆಯ ಸಂಚಾಲಕರಾಗಿ ಅನಂತಕುಮಾರ ಕೆಲಸ ಮಾಡಿದರು. ನಂತರ ಉತ್ತರ ಕನ್ನಡ ಜಿಲ್ಲೆಯ ಹೊಣೆಯನ್ನು ಅವರಿಗೆ ವಹಿಸಲಾಯಿತು. ಮುಸ್ಲೀಂ ವ್ಯಕ್ತಿಯೊಬ್ಬರಿಗೆ ಚಾಕು ಇರದ ಪ್ರಕರಣದಲ್ಲಿ ಅನಂತಕುಮಾರ ಆರೋಪಿಯಾಗಿದ್ದರು. ಜಾಮೀನಿನ ಮೇಲೆ ಹೊರ ಬಂದು 1996ರಲ್ಲಿ ಚುನಾವಣೆಗೆ ಸ್ಪರ್ಧಿಸಿದರು. ಚಿತ್ತರಂಜನ್ ಹತ್ಯೆ ಬಿಸಿಯಲ್ಲಿದ್ದ ಉತ್ತರ ಕನ್ನಡ ಜಿಲ್ಲೆ ಅನಂತಕುಮಾರ ಹೆಗಡೆಯವರನ್ನು 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿತು. ಕಾಂಗ್ರೆಸ್ ಹಿಡಿತದಲ್ಲಿದ್ದ ಕೆನರಾ ಕ್ಷೇತ್ರ ಅನಂತಕುಮಾರರ ಮೂಲಕ ಬಿಜೆಪಿ ಪಾಲಾಯಿತು. ಅದಾದ ಮೇಲೆ ಬಗಲಿನಲ್ಲಿಯೇ ಯಶಸ್ಸನ್ನು ಇರಿಸಿಕೊಂಡ ಅನಂತಕುಮಾರ ಮತ್ತೆ ಹಿಂದೆ ತಿರುಗಲಿಲ್ಲ. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ದಿ ಪಡೆದರು. ಒಂದೇ ನೋಟದಲ್ಲಿ ಎದುರಾಳಿಗಳನ್ನು ಸೋಲಿಸಿದರು. ಮಾತಿನ ಮೋಡಿಯಲ್ಲಿಯೇ ಜನರನ್ನು ಸೆಳೆದರು. ದೇಶ-ವಿದೇಶ ಪ್ರವಾಸ ಕೈಗೊಂಡು ಅಲ್ಲಿನ ಅಭಿವೃದ್ದಿ ಕಥೆಗಳನ್ನು ಸ್ವಾರಸ್ಯಕರವಾಗಿ ಜನತೆಗೆ ತಮ್ಮ ಭಾಷಣದ ಮೂಲಕ ಪ್ರಸ್ತುತ ಪಡಿಸಿದರು. 1996ರ ಲೋಕಸಭಾ ಚುನಾವಣೆಯಲ್ಲಿ ಮಾರ್ಗರÉೀಟ್ ಆಳ್ವಾ ಲೋಕಸಭೆಗೆ ಸ್ಪರ್ಧಿಸಿದ್ದರು. ಈ ವೇಳೆ ಅನಂತಕುಮಾರ ಕೂಡ ಸ್ಪರ್ಧೆಯಲ್ಲಿದ್ದರು. ಮಾರ್ಗರೇಟ್ ಆಳ್ವಾ ವಿರುದ್ದ ಅನಂತಕುಮಾರ ಮೊದಲ ಸೋಲು ಅನುಭವಿಸಲಾಯಿತು. 10 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡರು. ಅದಾದ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲಿಯೂ ಅನಂತಕುಮಾರ ಸತತವಾಗಿ ಗೆಲುವು ಕಂಡರು. ಎರಡು ದಶಕಗಳ ಕಾಲ ಸುದೀರ್ಘವಾಗಿ ಸಂಸದರಾದರು. ಈ ವೇಳೆ ಕ್ಷೇತ್ರದಲ್ಲಿ ಅನೇಕ ಜನಪ್ರತಿನಿಧಿಗಳನ್ನು ಬೆಳೆಸಿದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಖಾನಾಪುರ ಭಾಗದಲ್ಲಿಯೂ ಪ್ರಭಾವ ಹೊಂದಿದರು.

***********************************

* ಕುಟುಂಬದವರಿಗೂ ಅರಿವಿರಲಿಲ್ಲ!
ಸಂಸದ ಅನಂತಕುಮಾರ ಹೆಗಡೆ ಕೇಂದ್ರ ಸಚಿವರಾಗುವ ಸಂಗತಿ ಆರಂಭದಲ್ಲಿ ಅವರ ಕುಟುಂಬದವರಿಗೂ ಪಾಲಕರಿಗೂ ತಿಳಿದಿರಲಿಲ್ಲ. ಅನಂತಕುಮಾರ ಹೆಗಡೆಯವರ ತಂದೆ ದತ್ತಾತ್ರಯ ಲಕ್ಷ್ಮೀನಾರಾಯಣ ಹೆಗಡೆ ದೇವರ ಕಾರ್ಯ ನಡೆಸುವ ತಯಾರಿಯಲ್ಲಿದ್ದರು. ತಾಯಿ ಲಲಿತಾ ಹೆಗಡೆ ಕೂಡ ಅವರಿಗೆ ಸಹಾಯ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಸೆ. 5ರಂದು ಅನಂತ ಚತುರ್ಥಶಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ಕುರಿತು ಕುಟುಂಬದವರಲ್ಲಿ ಚರ್ಚೆ ನಡೆಯುತ್ತಿತ್ತು. ಮಗ ಐದು ಬಾರಿ ಸಂಸದನಾದರೂ ಇನ್ನು ಗ್ರಾಮೀಣ ಭಾಗದಲ್ಲಿ ಉಳಿದು ಸರಳ ಜೀವನ ನಡೆಸುತ್ತಿರುವ ಅನಂತಕುಮಾರ ಹೆಗಡೆಯವರ ತಂದೆ ತಾಯಿ ಶನಿವಾರ ಅನಂತ ಚತುರ್ದಶಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಬಂಧು-ಮಿತ್ರರಿಗೆ ಆಮಂತ್ರಿಸುತ್ತಿದ್ದರು. ಕೆಲವರಿಗೆ ದೂರವಾಣಿ ಮೂಲಕ ಆಮಂತ್ರಿಸಿದರು. ಆಪ್ತರನ್ನು ಖುದ್ದು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಬರುವಂತೆ ಕೇಳಿಕೊಂಡರು. ಇದಾದ ನಂತರ ಅನಂತಕುಮಾರ ಹೆಗಡೆ ಕೇಂದ್ರ ಸಚಿವರಾಗುತ್ತಾರೆ ಎಂಬ ಸುಳಿವು ಮಾದ್ಯಮದಲ್ಲಿ ಬಿತ್ತರಗೊಂಡಿದ್ದು, ಸುಳಿವು ಸತ್ಯವಾದ ನಂತರ ಪಾಲಕರು ಸಂಬಂಧಿಕರ ಬಳಿ ಖುಷಿ ಹಂಚಿಕೊಂಡರು.

* ಹಿಂದೂ ವಾದಿ-ಇಸ್ಲಾಂ ವಿರೋಧಿ
“ಮುಸ್ಲೀಂಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲರೂ ಮುಸ್ಲೀಂಮರೇ” ಎಂಬುದು ಅನಂತಕುಮಾರ ಹೆಗಡೆ ಪದೇ ಪದೇ ಉಚ್ಚರಿಸುವ ಮಾತುಗಳಲ್ಲಿ ಒಂದು. ಮುಸ್ಲೀಂ ವಿರೋಧಿಯಂತೆ ವರ್ತಿಸುವ ಅನಂತಕುಮಾರ ಹೆಗಡೆ ಅನೇಕ ಚುನಾವಣಾ ಪ್ರಚಾರಗಳಲ್ಲಿ ಮುಸ್ಲೀಂ ಸಮುದಾಯದವರ ಓಟು ತಮಗೆ ಬೇಡ ಎಂದು ಬಹಿರಂಗವಾಗಿ ಹೇಳಿದ್ದರು. ಅಪ್ಪಟ ಹಿಂದುಗಳು ಯಾವಾಗಲೂ ತಮ್ಮೊಂದಿಗೆ ಇರುತ್ತಾರೆ. ಅವರು ಬಿಜೆಪಿಯನ್ನೇ ಬೆಂಬಲಿಸುತ್ತಾರೆ ಎಂದು ನಂಬಿದವರು. ದೇಶದ್ರೋಹಿಗಳಿಗೆ ನಮ್ಮದೇಶದಲ್ಲಿ ಜಾಗವಿಲ್ಲ ಎಂಬಂತಹ ಪ್ರಚೋದನಾಕಾರಿ ಹಾಗೂ ಉದ್ವೇಗದ ಮಾತುಗಳಿಂದಲೇ ಜನಮನ್ನಣೆಗಳಿಸಿದ ನಾಯಕ ಎಂದರೆ ಅದು ಅನಂತಕುಮಾರ ಹೆಗಡೆ. ಉತ್ತರ ಕನ್ನಡ ಜಿಲ್ಲಾಡಳಿತ ಆಚರಿಸುವ ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿಯೂ ತಮ್ಮ ಹೆಸರು ಹಾಕದಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

* ವೈದ್ಯರನ್ನು ಥಳಿಸಿ ಸುದ್ದಿಯಾದರು!
ಈಚೆಗೆ ಶಿರಸಿಯ ಆಸ್ಪತ್ರೆಯೊಂದರಲ್ಲಿ ಅನಂತಕುಮಾರ ಹೆಗಡೆ ಅವರ ತಾಯಿಯನ್ನು ಚಿಕಿತ್ಸೆಗಾಗಿ ದಾಖಲಿಸಿದ್ದರು. ಸರಿಯಾದ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣಕ್ಕೆ ವೈದ್ಯರನ್ನು ಥಳಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಅನಂತಕುಮಾರ ಹೆಗಡೆ ಸುದ್ದಿಯಾಗಿದ್ದರು. ಆಸ್ಪತ್ರೆ ಆವರಣದಲ್ಲಿ ವೈದ್ಯರನ್ನು ಎಳೆದುಕೊಂಡು ಹೋಗಿ ಹೊಡೆದಿದ್ದು ಸಿಸಿ ಕ್ಯಾಮಾರಾದಲ್ಲಿ ದಾಖಲಾಗಿತ್ತು. ವಿವಿಧ ವೈದ್ಯ ಸಂಘಟನೆಗಳು ಸಂಸದರ ವಿರುದ್ದ ಪ್ರತಿಭಟಿಸಿದ್ದರು. ರಾಜಕೀಯ ವಿರೋಧಿಗಳಿಗೂ ಹಲ್ಲೆ ವಿಷಯ ಆಹಾರವಾಗಿತ್ತು. ಇಷ್ಟಾದರೂ ಅನಂತಕುಮಾರ ವಿರುದ್ದ ವೈದ್ಯರು ದೂರು ನೀಡಿರಲಿಲ್ಲ. ಕೊನೆಗೆ ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

ಕಾಂಗ್ರೆಸಿಗರ ಮತ ಪಡೆದ ಬಿಜೆಪಿ ಸಂಸದ!
ಬಿಜೆಪಿ ನಾಯಕ ಅನಂತಕುಮಾರ ಹೆಗಡೆಯವರ ನಡೆ-ನುಡಿ ಬಲ್ಲ ಕಾಂಗ್ರೆಸಿಗರು ಕೂಡ ಲೋಕಸಭೆ ಚುನಾವಣೆಯಲ್ಲಿ ತೆರೆಮರೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು. ಚುನಾವಣೆಯೊಂದರಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಸಚಿವ ಆರ್.ವಿ ದೇಶಪಾಂಡೆ ಕೂಡ ತಮಗೆ ಮತ ಹಾಕಿದ ವಿಷಯವನ್ನು ಅನಂತಕುಮಾರ ಹೆಗಡೆ ಬಯಲಿಗೆಳೆದಿದ್ದರು. ಇದಲ್ಲದೇ ಕುಮಟಾ ಶಾಸಕಿ ಶಾರದಾ ಶೆಟ್ಟಿ ಹಾಗೂ ಕಾಂಗ್ರೆಸ್ ಪಕ್ಷದ ಅನೇಕರು ತಮ್ಮ ಬೆಂಬಲಕ್ಕಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ಯಾವದೇ ಪ್ರತಿಕ್ರಿಯೆ ನೀಡಿರಲಿಲ್ಲ.

* ಬಿಎಸ್‍ವೈ ಶಿಷ್ಯ ಅನಂತ
ಅನಂತಕುಮಾರ ಹೆಗಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಆಪ್ತರು. ಹಲವು ಬಾರಿ ಯಡಿಯೂರಪ್ಪನವರ ಪರ ಅನಂತಕುಮಾರ ಹೆಗಡೆ ಬ್ಯಾಟಿಂಗ್ ಮಾಡಿದ್ದರು. ಯಡಿಯೂರಪ್ಪ ನುಡಿದಂತೆ ನಡೆಯುವ ಅನಂತಕುಮಾರ ಹೆಗಡೆ, ಯಡಿಯೂರಪ್ಪ ಜಿಲ್ಲೆಗೆ ಬಂದಾಗಲೆಲ್ಲ ಅವರ ಜೊತೆಯಿದ್ದರು. ಯಡಿಯೂರಪ್ಪ ಹೊರತು ಪಡಿಸಿ ಉಳಿದ ಯಾವ ಬಿಜೆಪಿ ನಾಯಕರು ಅಥವಾ ಕೇಂದ್ರ ಸಚಿವರು ಜಿಲ್ಲೆಗೆ ಬಂದಾಗಲೂ ಅನಂತಕುಮಾರ ಅವರ ಭೇಟಿ ಮಾಡಿರಲಿಲ್ಲ.  ಯಡಿಯೂರಪ್ಪ ಬಂದಾಗ ಅವರ ಜೊತೆಯಿದ್ದರು.

* ಸುಭಾಷ್ ಕುಟುಂಬಕ್ಕೆ ಆಪ್ತ
ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ಬಗ್ಗೆ ತೀವೃ ಕುತೂಹಲ ಹೊಂದಿದ್ದ ಅನಂತಕುಮಾರ ಹೆಗಡೆ, ಈ ಬಗ್ಗೆ ಸಾಕಷ್ಟು ಅದ್ಯಯನ ನಡೆಸಿದ್ದಾರೆ. ಸುಭಾಷಚಂದ್ರ ಬೋಸ್‍ರ ಕುಟುಂಬ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವದನ್ನು ಪತ್ತೆ ಹಚ್ಚಿದ ಅನಂತಕುಮಾರ ಹೆಗಡೆ ಮೂರು ವರ್ಷಗಳ ಕಾಲ ಅವರ ಕುಟುಂಬದ ಬಗ್ಗೆ ತಿಳಿಯಲು ಸಾಕಷ್ಟು ಹುಡುಕಾಟ ನಡೆಸಿದ್ದರು. ಸಿಕ್ಕ ಸುಳಿವುಗಳನ್ನು ಬಳಸಿಕೊಂಡು ಆಸ್ಟ್ರೇಲಿಯಾ ತೆರಳಿ ಸುಭಾಷ್ ಚಂದ್ರ ಬೋಸ್ ಕುಟುಂಬದವರನ್ನು ಭೇಟಿ ಮಾಡಿದ್ದರು. ನೇತಾಜಿ ಮರಣದ ಬಗ್ಗೆ ಹಿಂದಿನ ಸರ್ಕಾರ ತನಿಖೆಗೆ ನೇಮಿಸಿದ್ದ ಮುಖರ್ಜಿ ಆಯೋಗದ ವರದಿಯಲ್ಲಿ ಸಾವಿನ ಬಗ್ಗೆ ಸರಿಯಾದ ಮಾಹಿತಿಯಿಲ್ಲ ಎಂದು ಅನಂತಕುಮಾರ ಹೆಗಡೆ ದೂರಿದ್ದರು.

* ಗಣಿ ಲಂಚ ಪ್ರಕರಣ ಆರೋಪ
ಅಕ್ರಮ ಗಣಿಕಾರಿಕೆ ವಿಷಯದಲ್ಲಿ ಅನಂತಕುಮಾರ ಹೆಗಡೆ ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ. ಅಕ್ರಮ ಅದಿರು ಸಾಗಾಟ ಹಾಗೂ ಅಲ್ಲಿ ನಡೆದ ಭೃಷ್ಟಾಚಾರ ಪ್ರಕರಣ ತನಿಖೆ ನಡೆಸಲು ನೇಮಿಸಲಾಗಿದ್ದ ಲೋಕಾಯುಕ್ತ ತಂಡದವರು ವಶಪಡಿಸಿಕೊಂಡ ದಾಖಲೆಯಲ್ಲಿ ಅನಂತಕುಮಾರ ಹೆಸರು ಉಲ್ಲೇಖವಾಗಿತ್ತು. 2005ರಿಂದ 2007ರ ಅವದಿಯಲ್ಲಿ ಅನಂತಕುಮಾರ ಹೆಗಡೆ ಅದಾನಿ ಎಂಟರ್‍ಪ್ರೈಸಸ್‍ನಿಂದ ವರ್ಷಕ್ಕೆ 2ಲಕ್ಷ ನಂತೆ 6ಲಕ್ಷ ರೂ ಪಡೆದಿದ್ದಾರೆ ಎಂದು ಎಸ್‍ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಾಥಮಿಕ ತನಿಖಾ ವರದಿಯಲ್ಲಿ ನಮೂದಿಸಿತ್ತು. ಇದನ್ನು ಹೊರತು ಪಡಿಸಿ ಮಗನ ಉಪನಯನಕ್ಕಾಗಿ ಹತ್ತಾರು ಎಕರೆ ಕಾಡುನಾಶ ಮಾಡಿದ ಆರೋಪ ಅನಂತಕುಮಾರರ ಮೇಲಿದೆ. ಜನರ ಕೈಗೆ ಸಿಗುವದಿಲ್ಲ ಎಂಬುದು ಅನಂತಕುಮಾರ ಹೆಗಡೆ ವಿರುದ್ದ ಇರುವ ಅತಿ ದೊಡ್ಡ ಆರೋಪ.

* ವಿಧಾನಸಭೆಗೆ ಸ್ಪರ್ಧಿಸುವ ಇಂಗಿತ
2018ರ ವಿಧಾನಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ದಟ್ಟವಾಗಿದ್ದವು. ಕೆಲವಡೆ ನಡೆದ ಪಕ್ಷದ ಸಭೆಗಳಲ್ಲಿಯೂ ಮಾತನಾಡಿದ ಅನಂತಕುಮಾರ ಹೆಗಡೆ ವಿಧಾನಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಮಾದ್ಯಮದವರೊಂದಿಗೆ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವಿದ್ದು, ಎಲ್ಲಿ ಬೇಕಾದರೂ ಗೆಲ್ಲಬಲ್ಲೆ ಎನ್ನುವದರ ಮೂಲಕ ವಿಧಾನಸಭೆಗೆ ಸ್ಪರ್ಧಿಸುವ ಸುಳಿವು ನೀಡಿದ್ದರು. ಕೊನೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಅನಂತಕುಮಾರ ಹೆಗಡೆ ಆಯ್ಕೆ ಮಾಡಿಕೊಂಡಿರುವ ವದಂತಿ ಹಬ್ಬಿತ್ತು.

* ಸಂಸದಗೆ ಬಂದ ಕೊಲೆ ಬೆದರಿಕೆ
2014ರಲ್ಲಿ ಅನಂತಕುಮಾರ ಹೆಗಡೆಗೆ ಕೊಲೆ ಬೆದರಿಕೆ ಬಂದಿತ್ತು. ಪತ್ರದ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿತ್ತು. “ಐದು ಬಾರಿ ಸಂಸದರಾದರೂ ಜಿಲ್ಲೆಗೆ ಏನು ಕೊಡಲಿಲ್ಲ. ಹುಬ್ಬಳ್ಳಿ ಅಂಕೋಲಾ ರೈಲು ನಿರ್ಮಾಣ ವಿಷಯವನ್ನು ನಿರ್ಲಕ್ಷಿಸಿದ್ದೀರಿ. ರೈಲ್ವೇ ನೇಮಕಾತಿ ಬೇಗ ನಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು, ಇದು ತಮ್ಮಿಂದ ಸಾದ್ಯವಾಗದಿದ್ದರೆ ಕೊಲೆ ಮಾಡಬೇಕಾಗುತ್ತದೆ” ಎಂದು ಪತ್ರದಲ್ಲಿ ಬರೆಯಲಾಗಿತ್ತು. ನಿಮಗೆ ವೋಟು ಹಾಕಿ ಆಯ್ಕೆ ಮಾಡಿದ ಕಾರಣ ನಮಗೆ ಕೊಲೆ ಮಾಡಲು ಅಧಿಕಾರವಿದೆ ಎಂದು ಪತ್ರದಲ್ಲಿತ್ತು.

************************

ಅನಂತಕುಮಾರ ಹೆಗಡೆ ಶತ್ರುವನ್ನು ಕೂಡ ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ. ಅಪ್ಪಟ ದೇಶಭಕ್ತರಾಗಿರುವ ಅವರು ಸ್ವಾರ್ಥ ಇಲ್ಲದ ಮಹತ್ವಾಕಾಂಕ್ಷೆ ಹೊಂದಿದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ನಾಯಕತ್ವ ಬೆಳೆಸುತ್ತಾರೆ. 1996ರ ಲೋಕಸಭಾ ಚುನಾವಣೆಯಲ್ಲಿ ಅವರ ವಿರುದ್ದ ಸ್ಪರ್ಧಿಸಿದ್ದ ನನ್ನನ್ನು ಬಿಜೆಪಿಗೆ ಬರಮಾಡಿಕೊಳ್ಳುವಲ್ಲಿ ಅನಂತಕುಮಾರ ಹೆಗಡೆ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಅವರು ಕೇಂದ್ರದಲ್ಲಿ ಮಂತ್ರಿಯಾಗುತ್ತಿರುವದು ಹೆಮ್ಮೆಯ ವಿಷಯ.

– ಪ್ರಮೋದ ಹೆಗಡೆ, ಬಿಜೆಪಿ ಜಿಲ್ಲಾ ವಕ್ತಾರ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Karwar News Tagged With: ಅನಂತಕುಮಾರ ಹೆಗಡೆ, ಅಪ್ಪಟ ಹಿಂದುಗಳು, ಆಸ್ಟ್ರೇಲಿಯಾದಲ್ಲಿ ವಾಸ, ಉತ್ತರ ಕನ್ನಡ ಜಿಲ್ಲೆ, ಕಾಂಗ್ರೆಸಿಗರ ಮತ ಪಡೆದ ಬಿಜೆಪಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ, ಗಣಿ ಲಂಚ ಪ್ರಕರಣ ಆರೋಪ, ಜೋಕಿಂ ಆಳ್ವ, ತೆರೆಮರೆ, ದಿನಕರ ದೇಸಾಯಿ ಕೂಡ ಕ್ಷೇತ್ರ, ದೇವರಾಯ ನಾಯ್ಕ, ನಡೆದು, ಬಂದ ದಾರಿ, ಬಿ.ಎಸ್.ಯಡಿಯೂರಪ್ಪನವರಿಗೆ ಆಪ್ತರು, ಬಿಎಸ್‍ವೈ ಶಿಷ್ಯ ಅನಂತ, ಭಯೋತ್ಪಾದಕರೆಲ್ಲರೂ ಮುಸ್ಲೀಂಮರೇ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಆಳ್ವಿಕೆ, ಮಾರ್ಗರೇಟ್ ಆಳ್ವ ಮೊದಲಾದವರು, ಲೋಕಸಭೆಗೆ ಸ್ಪರ್ಧಿಸಿ, ವಿಧಾನಸಭೆಗೆ ಸ್ಪರ್ಧಿಸುವ ಇಂಗಿತ 2018, ವೈದ್ಯರನ್ನು ಥಳಿಸಿ ಸುದ್ದಿ, ಶತ್ರುವನ್ನು ಕೂಡ ಪ್ರೀತಿಯಿಂದ ನಡೆಸಿ, ಸಚಿವ ಆರ್.ವಿ.ದೇಶಪಾಂಡೆ, ಸರಿಯಾದ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣ, ಸಿಸಿ ಕ್ಯಾಮಾರಾ, ಸುಭಾಷ್ ಕುಟುಂಬಕ್ಕೆ ಆಪ್ತ, ಹಿಂದೂ ವಾದಿ-ಇಸ್ಲಾಂ ವಿರೋಧಿ

Explore More:

Reader Interactions

Comments

  1. ಅಶೋಕ ಹೆಗಡೆ. says

    September 4, 2017 at 3:03 pm

    ಸುರೇಶ ಪ್ರಭು ಅವರ 2016ರ ಮಧ್ಯದಲ್ಲಿ ಮಿರ್ಜಾನ ರೈಲು ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅನಂತಕುಮಾರ್ ಹೆಗಡೆ ಭಾಗವಹಿಸಿದ್ದರು. ನಾನು ಪ್ರತ್ಯಕ್ಷ ದರ್ಶಿ.

    Reply
  2. Shriranga hegde says

    September 5, 2017 at 11:46 am

    Please put some data on his development work / contribution to the people.

    Reply
  3. Chaitrika says

    February 25, 2019 at 1:47 pm

    Sir please give us some data about Ananth Kumar Hegde development works

    Reply

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar