ಕಾರವಾರ: ಎಲ್ಲಡೆ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ನಗರಕ್ಕೆ ದಾಂಡಿಯಾ ನೃತ್ಯ ಕಳೆ ತಂದಿದೆ.
ಒಂಬತ್ತು ದಿನಗಳ ಕಾಲ ನಡೆಯುವ ರಾಜಸ್ತಾನಿ ಹಾಗೂ ಗುಜರಾತಿಗರ ದಾಂಡಿಯಾ ನೃತ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಮನ ಸೆಳೆಯುತ್ತಿದೆ. ಸಾಂಪ್ರದಾಯಿಕ ದಾಂಡಿಯಾ ನೃತ್ಯಕ್ಕೆ ಸ್ಥಳೀಯರು ಹೆಜ್ಜೆ ಹಾಕುತ್ತಿದ್ದಾರೆ. ದೇವಿಯ ಸಾಂಪ್ರದಾಯಿಕ ಆಚರಣೆಯ ಜತೆ ಜತೆಗೆ ನಡೆಯುವ ದಾಂಡಿಯಾವನ್ನು ಕಾರವಾರ ತಾಲೂಕಿನಲ್ಲಿಯೇ ಸುಮಾರು ನೂರಕ್ಕೂ ಹೆಚ್ಚು ಕಡೆಗಳಲ್ಲಿ ನಿತ್ಯ ರಾತ್ರಿ ಆಯೋಜಿಸಲಾಗುತ್ತಿದೆ. ಹಬ್ಬುವಾಡಾದ ಕುಂಠಿ ಮಹಾಮಾಯಾ ದೇವಸ್ಥಾನ, ನಂದನಗದ್ದಾದ ಗಿಂಡಿವಾಡಾ ದೇವಸ್ಥಾನ, ದೇವಳಿವಾಡದ ದುರ್ಗಾದೇವಿ ದೇವ ಸ್ಥಾನ, ನ್ಯೂಕೆಚ್‍ಬಿ ಕಾಲೋನಿ, ನಂದನ ಗದ್ದಾದ ಕೋಟೇಶ್ವರ ದೇವಸ್ಥಾನ, ಸೋನಾರವಾಡಾದ ಶಿವನಾಥ ದೇವ ಸ್ಥಾನ, ಬಾಂಡಿಯಾಶಿಟ್ಟಾ, ಕಳಸ ವಾಡಾ, ಚೆಂಡಿಯಾ ಹೀಗೆ ನಾನಾ ಕಡೆಗಳಲ್ಲಿ ನಡೆಯುತ್ತಿದೆ. ಇದರಲ್ಲಿ ಯುವಕ, ಯುವತಿಯರು, ಮಹಿಳೆಯರು, ಪುರುಷರು, ವೃದ್ಧರು ಎನ್ನದೇ ಎಲ್ಲರೂ ವೃತ್ತಾಕಾರದಲ್ಲಿ ನಿಂತು ಕೋಲಾಟದ ರೀತಿಯಲ್ಲಿನ ನೃತ್ಯ ಮನರಂಜನೆಗಾಗಿಯಾದರೂ, ಭಕ್ತಿ ಪೂರ್ವಕವಾಗಿ ನಡೆಸಲಾಗುತ್ತದೆ. ವ್ಯಾಪಾರ, ಉದ್ಯೋಗಕ್ಕಾಗಿ ಜಿಲ್ಲೆಯ ನಾನಾ ಕಡೆಗೆ ವಲಸೆ ಬಂದಿರುವ ಗುಜರಾತಿಗಳು ತಾವು ನೆಲೆಸಿದ್ದಲ್ಲೆಲ್ಲ ದಾಂಡಿಯಾ ನೃತ್ಯವನ್ನು ಬೆಳೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಕಾರವಾರದ ಗುರುಭವನದಲ್ಲಿ ಗುಜರಾತಿಗಳು ನವರಾತ್ರಿ ವೇಳೆ ದಾಂಡಿಯಾ ನೃತ್ಯ ಪ್ರದರ್ಶಿಸಿದ್ದರು. ಅಲ್ಲಿಂದ ಕಾರವಾರಿಗರ ಆಕರ್ಷಣೆಗೆ ಒಳಗಾದ ದಾಂಡಿಯಾ ನೃತ್ಯ, ಇಂದು ಸ್ಥಳೀಯ ಸಂಪ್ರದಾಯ ಎನ್ನುವ ರೀತಿಯಲ್ಲಿ ಬೆಳೆದು ಬಂದಿದೆ. ಕುಮಟಾ, ಅಂಕೋಲಾ, ಶಿರಸಿ ಸೇರಿದಂತೆ ಇನ್ನಿತರ ತಾಲೂಕುಗಳಲ್ಲಿಯೂ ದಾಂಡಿಯಾ ನೃತ್ಯ ಕಾಣಿಸುತ್ತಿದೆ.
ಹೊಸ ಬಟ್ಟೆ ತೊಟ್ಟು, ಗೇಣುದ್ದದ ಜೋಡಿ ಕೋಲಿಗೆ ಬಣ್ಣದ ಕಾಗದ ಸುತ್ತಿ ಜನ ನೃತ್ಯಕ್ಕೆ ಸಿದ್ಧರಾಗಿರುತ್ತಾರೆ. ಝಗಮಗಿಸುವ ವಿದ್ಯುತ್ ದ್ವೀಪಗಳ ಬೆಳಕಲ್ಲಿ ತೇಲಿ ಬರುವ ಹಾಡಿಗೆ ನೃತ್ಯ ಮಾಡುವುದು ಜನರಿಗೆ ಖುಷಿ ನೀಡುತ್ತದೆ. ನೃತ್ಯಕ್ಕಾಗಿ ಕೆಲವರು ವೇಷ ಧರಿಸಿಕೊಂಡು ಬರುವುದೂ ಇದೆ. ಹೀಗಾಗಿ ಈ ನೃತ್ಯ ನೋಡುವುದಕ್ಕಾಗಿ ಜನರ ದಂಡೇ ನೆರೆದಿರುತ್ತದೆ. ಮೊದಲು ನೃತ್ಯದಲ್ಲಿ ಪಾಲ್ಗೊಳ್ಳುವವರೆಲ್ಲರೂ ಸೇರಿ ಒಬ್ಬರ ಎದುರು ಮತ್ತೊಬ್ಬರು ಬರುವಂತೆ ಜೋಡಿ ವೃತ್ತ ನಿರ್ಮಿಸಿಕೊಳ್ಳುತ್ತಾರೆ. ಎರಡು ವೃತ್ತದಲ್ಲಿರುವವರು ನೃತ್ಯ ಮಾಡುತ್ತ ಪರಸ್ಪರ ವಿರುದ್ಧ ದಿಕ್ಕಿಗೆ ಸುತ್ತುತ್ತಾರೆ. ಧ್ವನಿವರ್ಧಕದಿಂದ ಬರುವ ಹಾಡಿಗೆ ಹೆಚ್ಚೆ ಹಾಕುತ್ತ ಕೋಲಾಟ ಆಡುತ್ತ ನರ್ತಿಸುತ್ತಾರೆ. ಆದರೆ ದಾಂಡಿಯಾ ನೃತ್ಯಕ್ಕೂ ಮೊದಲು ಗರ್ಬಾ ನೃತ್ಯ ನಡೆಯುತ್ತದೆ. ಗಾರ್ಬಾ ಎಂದರೆ, ನವರಾತ್ರಿಯಲ್ಲಿ ದೇವಿಯ ಒಂದೊಂದು ಅವತಾರಕ್ಕೂ ಒಂದೊಂದು ರೀತಿಯಲ್ಲಿ ಹೆಜ್ಜೆಹಾಕಿ ನೃತ್ಯ ಮಾಡುವುದು. ಇದು ಆರಂಭದಲ್ಲಿ ಕನಿಷ್ಠ 15 ನಿಮಿಷ ನಡೆಯಬೇಕು. ಇದರ ನಂತರವೇ ದಾಂಡಿಯಾ ನೃತ್ಯ ಆರಂಭವಾಗುತ್ತದೆ. ಮಧ್ಯರಾತ್ರಿಯ ವರೆಗೂ ನೃತ್ಯ ನಡೆಯುತ್ತದೆ.
Leave a Comment