ಕಾರವಾರ:
ಸೀಬರ್ಡ ಯೋಜನಯಿಂದ ನಿರಾಶ್ರಿತರಾದ ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೌಕಾನೆಲೆ ನಿರಾಶ್ರಿತರ ಸ್ಥಳೀಯ ಬಂದರು ಮೀನುಗಾರರ ಸಹಕಾರಿ ಸಂಘವು ಕೇಂದ್ರ ಕೌಶಲ್ಯ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತ್‍ಕುಮಾರ್ ಹೆಗಡೆಯವರಿಗೆ ಮನವಿ ಸಲ್ಲಿಸಿದೆ.
ಸೀಬರ್ಡ್ ವ್ಯಾಪ್ತಿ ಪ್ರದೇಶದಲ್ಲಿ ತಲೆ ತಲಾಂತರಗಳಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿಕೊಂಡು ಬಂದ ಮೀನುಗಾರರು ಉದ್ಯೋಗ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಯೋಜನೆಗೆ ನಿರಾಶ್ರಿತರಾಗಿ ಜಮೀನು ಮತ್ತು ಮನೆ ಆಸ್ತಿ ಕಳೆದುಕೊಂಡ ಮೀನುಗಾರರಿಗೆ ಕನಿಷ್ಟ ಪರಿಹಾರ ಈಡಲಾಗಿದೆ. ಮೀನುಗಾರಿಕೆ ಉದ್ಯೋಗಕ್ಕೆ ಪ್ರಮುಖ ಆಸರೆಯಾದ ಕಡಲು ಹಾಗೂ ವಿವಿಧ ಕಡಲತೀರಗಳನ್ನು ತ್ಯಾಗ ಮಾಡಿದ ನಿರಾಶ್ರಿತರಿಗೆ ಪರಿಹಾರ ನೀಡಲು ಸರಕಾರ ನಿರ್ಲಕ್ಷ ವಹಿಸಿದೆ. ಹಿಂದೆ ಯೋಜನಾ ವ್ಯಾಪ್ತಿಯಲ್ಲಿ ಕೇವಲ ಒಂದೆರಡು ಗುಂಟೆ ಜಮೀನಿನಲ್ಲಿ ಮೀನುಗಾರರು ಮನೆ ನಿರ್ಮಿಸಿಕೊಂಡಿದ್ದರು. ಹೀಗಾಗಿ ಮೀನುಗಾರಿಕೆ ನಡೆಸಲಾಗುವ ಸಮುದ್ರವನ್ನು ತ್ಯಾಗ ಮಾಡಿದ ಮೀನುಗಾರಿಊ ಸೂಕ್ತ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ನಿರಾಶ್ರಿತ ಕುಟುಂಬದ ಮಕ್ಕಳಿಗೆ ಸೀಬರ್ಡ್ ಯೋಜನೆಯಲ್ಲಿ ಉದ್ಯೋಗ ನೀಡಬೇಕು. ಇದಕ್ಕಾಗಿ ಶೇ. 5 ರಷ್ಟು ಮೀಸಲಾತಿ ಕಲ್ಪಿಸಬೇಕು. ಸೀಬರ್ಡ್ ಯೋಜನೆಯಲ್ಲಿ ಉದ್ಯೋಗ ಪಡೆಯಬೇಕಾದರೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.75 ಅಂಕಗಳಿಸಿದವರಿಗೆ ಮಾತ್ರ ಅವಕಾಶ ಎಂಬ ನಿಯಮ ಸಡಿಲ ಮಾಡಬೇಕು. ಯೋಜನೆಗಾಗಿ ಭೂಮಿ ಕಳೆದುಕೊಂಡ ನಿರಾಶ್ರಿತ ಮೀನುಗಾರರ ಕುಟುಂಬಗಳ ಸದಸ್ಯರ ಸಂಖ್ಯೆ ಬೆಳೆದಿರುವುದರಿಂದ Áಸದ ಮನೆ ಸಾಕಾಗುವುದಿಲ್ಲ. ಬೇರೆ ಮನೆ ಕಟ್ಟಿಸಿಕೊಳ್ಳಲು ಜಮೀನಿನ ಕೊರತೆ ಕಾಡುತ್ತಿದೆ. ಆದ್ದರಿಂದ ಮೀನುಗಾರರಿಗೆ ಸರಕಾರ ಹೆಚ್ಚುವರಿ ನಿವೇಶನ ಮಂಜೂರಿ ಮಾಡಬೇಕು. ಸ್ಥಗಿತಗೊಂಡಿರುವ ಎನ್‍ಸಿಡಿಸಿ ಯೋಜನೆಯನ್ನು ಪುನರ್ ಸ್ಥಾಪಿಸಬೇಕು. ಈ ಯೋಜನೆಯಡಿ ಪ್ರತಿ 10 ಮಂದಿ ಮೀನುಗಾರರ ಗುಂಪಿಗೆ ಆಧುನಿಕ ಮಾದರಿಯ ಬೋಟ್ ಖರೀದಿಗೆ ಹಣಕಾಸು ಒದಗಿಸಬೇಕು ಎಂದು ಒತ್ತಾಯಿಸಿದರು.
ಇದಲ್ಲದೇ ಅಮದಳ್ಳಿಯ ಮುದಗಾ ಮೀನುಗಾರಿಕಾ ಬಂದರಿನಲ್ಲಿ ನಿರಾಶ್ರಿತರ ಬೋಟುಗಳು 200 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಮೀನುಗಾರಿಕಾ ಜಟ್ಟಿಯು ಬೋಟುಗಳನ್ನು ನಿಲ್ಲಿಸಲು ಸ್ಥಳಾವಕಾಶ ಸಾಕಾಗುವುದಿಲ್ಲ.ಇದರಿಂದ ನಿರಾಶ್ರಿತ ಮೀನುಗಾರರಿಗೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ಮುದಗಾ ಮೀನುಗಾರಿಕಾ ಬಂದರಿನ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷ ಉಮಾಕಾಂತ್ ಹರಿಕಂತ್ರ, ರವಿ ದುರ್ಗೇಕರ್, ಪ್ರದೀಪ್ ದುರ್ಗೇಕರ್, ರತನ್ ದುರ್ಗೇಕರ್, ಉದಯ ಬಬ್ರೂಕರ್, ಸಂಜೀವ್ ಮಾಜಾಳಿಕರ್, ನಿತೇಶ್ ಶ್ರೀಕಾಂತ್ ತಾಂಡೇಲ್,ನಾಗರಾಜ ಕೊಡಾರಕರ್, ಉದಯ ಹರಿಕಂತ್ರ ಇತರರಿದ್ದರು.
Leave a Comment