ಹಳಿಯಾಳ ; ಬಡವರಿಗೆ 504 ಮನೆಗಳನ್ನು ನಿರ್ಮಿಸಿ ನೀಡುವ ಯೋಜನೆಯು ಹಲವು ವರ್ಷಗಳಿಂದ ಕೆಲವು ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಅವುಗಳನ್ನು ಸರಿಪಡಿಸಿ ಇದೀಗ ಮೊದಲನೆ ಹಂತದಲ್ಲಿ 240 ಮನೆಗಳ ನಿರ್ಮಾಣಕ್ಕಾಗಿ 1.41 ಕೋಟಿ ರೂ ಅನುದಾನವನ್ನು ಮಂಜೂರಾತಿ ನೀಡುವುದರ ಜೊತೆಗೆ ಇನ್ನೂಳಿದ ಮನೆಗಳ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಇನ್ನಷ್ಟು ಅನುದಾನ ಬಿಡುಗಡೆಗೊಳಿಸುವುದಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಪುರಸಭೆಯ ಸಭಾಭವನದಲ್ಲಿ ನಡೆದ ಆಶ್ರಯ ಸಮಿತಿಯ ಸಭೆಯಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರು ಆಗಿರುವ ಸಚಿವ ದೇಶಪಾಂಡೆ ಮಾತನಾಡಿ ಅವರು ಬಡವರಿಗೆ ಸೂರು ನೀಡುವ ಬಹುದಿನಗಳ ಕನಸು ಶೀಘ್ರದಲ್ಲಿಯೇ ಈಡೇರಲಿದೆ. ಅಲ್ಲದೇ ಬಡವರಿಗಾಗಿಯೇ ಜಿ ಪ್ಲಸ್ ಟೂ ಮನೆಗಳ ಸಮುಚ್ಚಯ ನಿರ್ಮಾಣಕ್ಕಾಗಿ 1.41 ಕೋಟಿ ರೂ ಅನುದಾನವನ್ನು ಮಂಜೂರು ಮಾಡಲಾಗಿದ್ದು ಕಾಮಗಾರಿಗಳು ಇನ್ನೆರಡು ವಾರದಲ್ಲಿ ಆರಂಭವಾಗಲಿವೆ ಎಂದರು. 240 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳಿಂದ 90 ಲಕ್ಷ ರೂಗಳ ವಂತಿಗೆಯನ್ನು ಸಂಗ್ರಹಿಸಲಾಗಿದ್ದು ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ನಿರ್ಮಾಣದ ಉಸ್ತುವಾರಿ ನೀಡಲಾಗಿದ್ದು ಬಡವರಿಗೆ ಹೊರೆಯಾಗದ ಹಾಗೇ ನೋಡಿಕೊಳ್ಳಲು ಮರುಟೆಂಡರ್ ಕರೆಯಲಾಗಿದ್ದು ಅದನ್ನು ಸಹ ಕೆಲವೇ ದಿನಗಳಲ್ಲಿ ಸರಿಪಡಿಸಿ ಮುಂದಿನ ಕಾಮಗಾರಿಗಳಿಗೆ ಅನುವು ಮಾಡಿಕೊಡಲಾಗುವುದೆಂದ ಅವರು, ಪಟ್ಟಣದ ಗುಡ್ನಾಪೂರ ಬ್ಲಾಕ್ ನಂ 36/1ರಲ್ಲಿರುವ 1.09 ಎಕರೆ ಭೂಮಿಯಲ್ಲಿ 20*30 ಅಳತೆಯ 27 ನಿವೇಶನಗಳನ್ನು ರಚಿಸಿ ಅರ್ಹ ಬಡವರಿಗೆ ವಿತರಿಸುವಂತೆ ಪುರಸಭೆಯ ಅಧಿಕಾರಿಗಳಿಗೆ ಆದೇಶ ನೀಡಿದರು. ಪಟ್ಟಣದ ಮಧ್ಯಭಾಗದಲ್ಲಿ ಪುರಸಭೆಯ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದು ಸಿಟಿಎಸ್ ನಂ 577/13 ರಲ್ಲಿ ವಾಸಿಸುವ ರಹವಾಸಿಗಳಿಗೆ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಪರ್ಯಾಯ ನಿವೇಶಗಳನ್ನು ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಪಟ್ಟಣದಲ್ಲಿ ಅಕ್ರಮ ಬಡಾವಣೆಗಳ ಬಗ್ಗೆ ಚರ್ಚಿಸಿದ ಸಚಿವರು, ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಶ್ರಮದ ಹಣದಿಂದ ಬಡಾವಣೆಗಳಲ್ಲಿ ನಿವೇಶನಗಳನ್ನು ಪಡೆದು ನಂತರ ಪರಿತಪಿಸುವಂತಹ ವ್ಯವಸ್ಥೆ ಕಂಡು ಬಂದಿದ್ದು ಕೆಲ ಸಾರ್ವಜನಿಕರು ಸಹ ತಮಗೆ ಭೇಟಿಯಾಗಿ ತಮ್ಮ ನೋವನ್ನು ತೊಡಿಕೊಂಡಿದ್ದು ಇದರ ಕುರಿತು ಪುರಸಭೆಯ ಅಧಿಕಾರಿಗಳು ಗಂಭೀರವಾಗಿ ಪರಿಶೀಲನೆ ನಡೆಸಿ, ಅಕ್ರಮ ಬಡಾವಣೆಗಳನ್ನು ಗುರುತಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಜೊತೆಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದ ಬಡಾವಣೆಗಳಿಗೆ ಮಾತ್ರ ನಿವೇಶನ ಮಾರಾಟ ಮಾಡಲು ಅವಕಾಶ ನೀಡುವಂತೆ ಸೂಚಿಸಿದರು. ಹಳಿಯಾಳ ಪಟ್ಟಣವನ್ನು ಕಸಮುಕ್ತ ಹಾಗೂ ಮಾದರಿ ಪಟ್ಟಣವನ್ನಾಗಿ ಮಾಡಲು ಜನೇವರಿ 15ರಿಂದ ಪಟ್ಟಣದಲ್ಲಿ ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವದಲ್ಲಿ ಸ್ವಚ್ಚತಾ ಅಭಿಯಾನವನ್ನು ಆರಂಭಿಸಿ ಪಟ್ಟಣದಲ್ಲಿ ನೈರ್ಮಲ್ಯ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸಲು ತಹಶೀಲದಾರ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಸಚಿವರು ಆದೇಶಿಸಿದರು. ಸಭೆಯಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ, ಹಂಗಾಮಿ ಅಧ್ಯಕ್ಷ ಅರುಣ ಬೂಬಾಟಿ, ತಹಶೀಲದಾರ ವಿದ್ಯಾಧರ ಗುಳಗುಳಿ,ಆಶ್ರಯ ಸಮಿತಿಯ ಸದಸ್ಯರಾದ ಪರಶುರಾಮ ಹರ್ಲಿ, ಜಿ.ಡಿ.ಗಂಗಾಧರ,ವಿಮಲಾಬಾಯಿ ವಡ್ಡರ, ಗುಲಾಭಶಾ ಲತೀಪನವರ ಇದ್ದರು.
Leave a Comment