ಹಳಿಯಾಳ:
ಗುಜರಾತ ಸರ್ಕಾರ ಅಲ್ಲಿನ ಸಿದ್ಧಿ ಸಮುದಾಯದವರನ್ನು ಮೂಲ ನಿವಾಸಿಗಳೆಂದು ಘೋಷಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ಸಿದ್ಧಿಗಳನ್ನು ಮೂಲ ನಿವಾಸಿಗಳೆಂದು ಘೋಷಿಸಬೇಕು ಅಲ್ಲದೇ ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಸಿದ್ಧಿ ಸಮುದಾಯದ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿದ ತಾಲೂಕಿನ ಸಿದ್ದಿ ಸಮುದಾಯದವರು ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ವಿದ್ಯಾಧರ ಗುಳಗುಳೆಗೆÉ ಸಲ್ಲಿಸಿದರು.
ಮನವಿಯಲ್ಲಿ :- ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅವರು 1-1-16 ರಲ್ಲಿ ನೂತನ ವರ್ಷಾಚರಣೆಗಾಗಿ ತಾಲೂಕಿನ ವಾಡಾ ಗ್ರಾಮದಲ್ಲಿ ವಾಸ್ತ್ಯವ ಹೂಡಿ ಸಿದ್ಧಿಗಳ ಅಭಿವೃದ್ಧಿಗಾಗಿ ಘೊಷಿಸಿದ 52ಕೋಟಿ ಅನುದಾನದ ಪ್ಯಾಕೇಜ್ ಯೋಜನೆಗಳಾದ ಪ್ಯಾಕೇಜನಲ್ಲಿ ಘೋಷಿಸಿದಂತೆ ಸಿದ್ಧಿ ಸಮುದಾಯದವರಿಗೆ 100 ಆಶ್ರಯ ಮನೆಗಳನ್ನು ಮಂಜೂರು ಮಾಡಬೇಕು, ಸಿದ್ಧಿ ಸಮುದಾಯದ 100 ಸ್ತ್ರೀ ಶಕ್ತ ಸಂಘಗಳಿಗೆ ತಲಾ 50 ಸಾವಿರ ಸಾಲ ಸೌಲಭ್ಯ ನೀಡಬೇಕು, ಸಿದ್ಧಿಗಳ ಹಾಡಿಗಳಲ್ಲಿ ಹಾಗೂ ವಾಡಾಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಪರಿಶೀಲನೆ ನಡೆಸಬೇಕು. ಸಿದ್ಧಿಗಳಿಗೆ ಕೊಳವೆ ಬಾವಿಯನ್ನು ಮಂಜೂರು ಮಾಡಬೇಕು, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಿದ್ಧಿ ಸಮುದಾಯದವರಿಗೆ ಭೂಒಡೆತನದ ಹಕ್ಕು ಪತ್ರವನ್ನು ನೀಡಬೇಕು, ಮಂಗಳೂರಿನಲ್ಲಿರುವ ಪರಿಶಿಷ್ಟ ಪಂಗಡ-ವರ್ಗಗಳ ನಾಗರಿಕ ಹಕ್ಕು ನಿರ್ದೇಶನಾಲಯದ ಕಚೇರಿಯನ್ನು ಉತ್ತರ ಕನ್ನಡಕ್ಕೆ ಸ್ಥಳಾಂತರಿಸಬೇಕು, ಸಿದ್ಧಿ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ನೀಡಲು ಹಳಿಯಾಳ ಇಲ್ಲವೇ ಯಲ್ಲಾಪುರದಲ್ಲಿ ಏಕಲವ್ಯ ಶಾಲೆಯನ್ನು ಮಂಜೂರು ಮಾಡಬೇಕು, ಕಾರವಾದಲ್ಲಿರುವ ಗಿರಿಜನ ಅಭಿವೃದ್ಧಿ ಇಲಾಖೆ ಕಚೇರಿಯನ್ನು ಹಳಿಯಾಳ ಇಲ್ಲವೇ ಯಲ್ಲಾಪುರಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಲಾಗಿದೆ. ವೇದಿಕೆಯ ಅಧ್ಯಕ್ಷ ದಿಯೋಗ ಬಸ್ತಾಂವ ಸಿದ್ಧಿ ನೆತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ಧಿ ಪ್ರಮುಖರಾದ ಇಮಾಮಹುಸೇನ ಸಿದ್ಧಿ, ಮಿಂಗೆಲ ಸಿದ್ಧಿ, ನನ್ನೆಸಾಬ ಸಿದ್ಧಿ, ಮನ್ವೇಲ ಸಿದ್ಧಿ, ಬಿಯಾಮಾ ಸಿದ್ಧಿ, ಮೇರಿ ಸಿದ್ಧಿ ಇನ್ನಿತರರು ಇದ್ದರು.
Leave a Comment