ಹಳಿಯಾಳ:- ಹಳಿಯಾಳ ಪುರಸಭೆಯು ಒಟ್ಟೂ 464 ಲಕ್ಷ ರೂಗಳ ಆದಾಯದ ನಿರೀಕ್ಷೆಯೊಂದಿಗೆ 432 ಲಕ್ಷರೂಗಳ ವೆಚ್ಚ ತೋರಿಸುವ ಮೂಲಕ ಒಟ್ಟೂ 32 ಲಕ್ಷರೂ ಉಳಿತಾಯದ 2018-19 ಸಾಲಿನ ಬಜೆಟ್ ಮಂಡನೆಯನ್ನು ಮಾಡಿದೆ. ಕಳೆದ ಬಾರಿಯು ಸಹ ಉಳಿತಾಯದ ಬಜೆಟ್ ಮಂಡನೆ ಮಾಡಲಾಗಿರುವುದು ಗಮನಾರ್ಹವಾಗಿದ್ದು ಪುರಸಭೆಯ ಸಭಾಭವನದಲ್ಲಿ ನಡೆದ ಬಜೆಟ್‍ನ ವಿಶೇಷ ಸಭೆಯಲ್ಲಿ ಅಧ್ಯಕ್ಷ ಶಂಕರ ಬೆಳಗಾಂವಕರ ಬಜೆಟ್ ಮಂಡಿಸಿದರು. ವೇತನ ಮತ್ತು ವಿದ್ಯುತ್ ಅಂದಾಜು ಅನುದಾನ 281 ಲಕ್ಷರೂಗಳನ್ನು ನಿರೀಕ್ಷೆ ಮಾಡಲಾಗಿದ್ದು ಅದನ್ನು ವೆಚ್ಚಕ್ಕೆ ಸಮಾನಗೊಳಿಸಲಾಗಿದ್ದು , ಎಸ್‍ಎಫ್‍ಸಿ ವಿಶೇಷ ಅನುದಾನ, 14ನೇ ಹಣಕಾಸು, ಮತ್ತು ಇತರೇ ಅನುದಾನದಿಂದ 8421 ಲಕ್ಷಗಳನ್ನು ನಿರೀಕ್ಷೆ ಮಾಡಲಾಗಿದ್ದು ಈ ಅನುದಾನವು ವೆಚ್ಚಕ್ಕೆ ಸರಿದೂಗಿಸಲಾಗಿದೆ. ಪಟ್ಟಣದಲ್ಲಿರುವ ಪುರಸಭೆಯ ಅಂಗಡಿ ಮುಗ್ಗಟ್ಟು ಮತ್ತು ಸಂಕೀರ್ಣಗಳ ಮೂಲಕ ಒಟ್ಟೂ 30 ಲಕ್ಷ ರೂಗಳ ಆದಾಯದ ನಿರೀಕ್ಷೆ, ನೀರಿನ ಶುಲ್ಕಗಳಿಂದ 140 ಲಕ್ಷ ರೂ, ಅಭಿವೃದ್ದಿ ಮತ್ತು ಮೇಲ್ವಿಚಾರಣಾ ಶುಲ್ಕದ ರೂಪದಲ್ಲಿ 50 ಲಕ್ಷ ರೂ, ಬ್ಯಾಂಕ್ ಖಾತೆಗಳಿಂದ ಬಡ್ಡಿ ರೂಪದಲ್ಲಿ 15 ಲಕ್ಷರೂ, ಮನೆಗಳ ಕರ 52 ಲಕ್ಷ ರೂ, ತರಕಾರಿ ಮಾರುಕಟ್ಟೆಯಿಂದ 4 ಲಕ್ಷ ರೂ, ಆಸ್ತಿ ಪರಭಾರೆ ಮೂಲಗಳಿಂದ 66 ಲಕ್ಷ ರೂ, ಖಾತಾ ಬದಲಾವಣೆ ಶುಲ್ಕಗಳಿಂದ 22 ಲಕ್ಷ ರೂ, ಅಕ್ರಮ ಸಕ್ರಮದಿಂದ 15 ಲಕ್ಷ ರೂ, ವ್ಯಾಪಾರ ಪರವಾನಗಿ ಶುಲ್ಕ 7 ಲಕ್ಷ, ಗುತ್ತೀಗೆದಾರರು ನೀಡುವ ನೊಂದಣಿ ಶುಲ್ಕದಿಂದ 8 ಲಕ್ಷ ರೂ, ಮನೆ ಕರ ಮೇಲಿನ ಬಡ್ಡಿಯಿಂದ 8 ಲಕ್ಷ ರೂ ಮತ್ತು ಇನ್ನಿತರ ಆದಾಯ ಮೂಲಗಳಿಂದ 5 ಲಕ್ಷ ರೂ ಸೇರಿದಂತೆ ಒಟ್ಟೂ 464 ಲಕ್ಷ ರೂ ಆದಾಯ ನಿರೀಕ್ಷೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ವೇತನ ಅನುದಾನದಲ್ಲಿ 120 ಲಕ್ಷ ರೂ, ವಿದ್ಯುತ ಅನುದಾನ 150 ಲಕ್ಷ ರೂ, ಮುದ್ರಾಂಕ ಅನುದಾನ 1 ಲಕ್ಷ ರೂ ಮತ್ತು ಇನ್ನಿತರೆ ಅನುದಾನಗಳಿಂದ 150 ಲಕ್ಷ ರೂಗಳು ಸೇರಿ 281 ಲಕ್ಷ ರೂಗಳ ಅನುದಾನವನ್ನು ನಿರೀಕ್ಷಿಸಲಾಗಿದೆ. ಬಂಡವಾಳ ಆದಾಯ ರೂಪದಲ್ಲಿ 14ನೇ ಹಣಕಾಸು ಅನುದಾನ 132 ಲಕ್ಷರೂ, ರಾಜ್ಯ ಹಣಕಾಸು ಆಯೋಗದ ಅನುದಾನ 122 ಲಕ್ಷ ರೂ, ವಿಶೇಷ ಅನುದಾನ ರೂಪದಲ್ಲಿ 500 ಲಕ್ಷ ರೂ ಮತ್ತು ಒಳಚರಂಡಿ ಅನುದಾನ 7667 ಲಕ್ಷ ರೂ. ಆಡಳಿತವನ್ನು ಸುಲಲಿತವಾಗಿ ನಡೆಸಲು ಸಿಬ್ಬಂದಿಗಳಿಗೆ ವೇತನ ನೀಡಲು ಮತ್ತು ಇನ್ನಿತರ ಭತ್ಯೆಗಳನ್ನು ಸರಿದೂಗಿಸಲು 40 ಲಕ್ಷ ರೂ, ಪಿಂಚಣಿ ವಂತಿಗೆ ಮತ್ತು ಸರ್ಕಾರಕ್ಕೆ ಭರಣಾ ಮಾಡಲು 9 ಲಕ್ಷ ರೂ, ಕಾರ್ಯಕ್ರಮಗಳನ್ನು ನಡೆಸಲು 10 ಲಕ್ಷ ರೂ, ಪ್ರಚಾರ ವೆಚ್ಚಕ್ಕಾಗಿ 5 ಲಕ್ಷ ರೂ, ದುರಸ್ಥಿ ಮತ್ತು ನಿರ್ವಹಣೆಗಾಗಿ 5 ಲಕ್ಷ ರೂ, ಕಚೇರಿ ವೆಚ್ಚಕ್ಕಾಗಿ 9 ಲಕ್ಷ ರೂ, ಸದಸ್ಯರಿಗೆ ಗೌರವಧನ ನೀಡಲು 4.50ಲಕ್ಷ ರೂ ಮತ್ತು ಸದಸ್ಯರ ಪ್ರವಾಸ ಭತ್ಯೆಗಾಗಿ 4 ಲಕ್ಷ ರೂ, ವಿದ್ಯುತ ಬಿಲ್ ಪಾವತಿಸಲು 20 ಲಕ್ಷ ರೂ, ಹೊರ ಗುತ್ತೀಗೆ ಮೂಲಕ ಬೀದಿ ದೀಪಗಳನ್ನು ಬೆಳಗಿಸಲು 6 ಲಕ್ಷ ರೂ, ಪೌರಕಾರ್ಮಿಕರು ಮತ್ತು ಧಪೇದಾರರಿಗೆ ವೇತನ ನೀಡಲು 40 ಲಕ್ಷ ರೂ ಸೇರಿದಂತೆ ಇನ್ನಿತರ ವೆಚ್ಚಗಳಿಗಾಗಿ 432 ಲಕ್ಷ ರೂಗಳನ್ನು ವೆಚ್ಚ ಮಾಡಲು ನಿರ್ಧರಿಸಲಾಗಿದೆ. 14ನೇ ಹಣಕಾಸು ಆಯೋಗ ಮತ್ತು ಎಸ್.ಎಫ್.ಸಿ ಅನುದಾನದಲ್ಲಿ ಬರುವ ಹಣದಲ್ಲಿ ಪುರಸಭೆಯ ನೂತನ ಕಾರ್ಯಾಲಯ ನಿರ್ಮಾಣಕ್ಕಾಗಿ 100 ಲಕ್ಷ ರೂ, ಪಟ್ಟಣದ ಲೋಕೋಪಯೋಗಿ ಮತ್ತು ನ್ಯಾಯಾಲಯದ ಹತ್ತಿರ ಅಂಗಡಿಗಳ ಸಂಕೀರ್ಣ ನಿರ್ಮಿಸಲು 3ಕೊಟಿ ರೂ, ಕುಡಿಯುವ ನೀರು ಪೊರೈಕೆಯ ವಂತಿಗೆಗಾಗಿ 130 ಲಕ್ಷ ರೂ ವ್ಯಯಿಸಲು ಉದ್ದೇಶಿಸಲಾಗಿದೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅರುಣ ಬೂಬಾಟಿ, ಸ್ಥಾಯಿ ಸಮಿತಿಯ ಚೇರಮನ್ ಗಾಯಿತ್ರಿ ನೀಲಜಕರ, ಮುಖ್ಯಾಧಿಕಾರಿ ಕೇಶವ ಚೌಗುಲೆ, ಸದಸ್ಯರಾದ ಸತ್ಯಜೀತ ಗಿರಿ, ಉಮೇಶ ಬೋಳಶೆಟ್ಟಿ, ಶ್ರೀಕಾಂತ ಹೂಲಿ ಇತರರು ಇದ್ದರು.
Leave a Comment