ಹಳಿಯಾಳ: ತಾಲೂಕಿನ ಕೆಲವು ಬೆರಳೆಣಿಕೆಯಷ್ಟು ಗ್ರಾಮಗಳಲ್ಲಿ ಮಾರಣಾಂತಿಕ ಡೆಂಘ್ಯು ಜ್ವರ ಕಾಣಿಸಿಕೊಳ್ಳುತ್ತಿದ್ದು ಹಳಿಯಾಳ ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ಹಿರಿಯ ವೈಧ್ಯ ಡಾ|| ಬಿ.ವಿ.ಮುಡಬಾಗಿಲ್ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಅವರು ತಾಲೂಕಿನ ನೀರಲಗಾ, ಯಡೋಗಾ, ಸಾಂಬ್ರಾಣಿ, ಕೇರವಾಡ, ಮದ್ನಳ್ಳಿ ಗ್ರಾಮಗಳಲ್ಲಿ ಡೆಂಘ್ಯು ಜ್ವರದ ಲಕ್ಷಣ ಹೆಚ್ಚಾಗಿರುವುದು ಕಂಡು ಬಂದಿದ್ದು ಪಟ್ಟಣದ ತಮ್ಮ ಆಸ್ಪತ್ರೆಗೂ ಡೆಂಘ್ಯು ರೋಗಿಗಳು ಬಹಳಷ್ಟು ಸಂಖ್ಯೆಯಲ್ಲಿ ಚಿಕಿತ್ಸೆಗೆಂದು ಬರುತ್ತಿದ್ದಾರೆಂದು ತಿಳಿಸಿದರು. ಡೆಂಘ್ಯೂ ಬಗ್ಗೆ ಮಾಹಿತಿ ಪಡೆದಾಗ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಡೆಂಘ್ಯು ವ್ಯಾಪಿಸಿದ್ದು, ಒರ್ವ ಯುವಕನನ್ನು ಈ ಡೆಂಘ್ಯು ಬಲಿ ತೆಗೆದು ಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದ ಮುಡಬಾಗಿಲ್ ತಾಲೂಕಿನ ಹವಗಿ ಗ್ರಾಮದ ಪ್ರಸಾದ ಬಾಬು ಶೆಟ್ಟಿ(26) ಜುಲೈ 2ರಂದು ಡೆಂಘ್ಯುಗೆ ಅಸುನಿಗಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಸಾದ ಕುಟುಂಬದವರು ಕೊಟ್ಟ ಮಾಹಿತಿಯ ಪ್ರಕಾರ ದಾಂಡೇಲಿಯ ಖಾಸಗಿ ವೈದ್ಯರ ಚಿಕಿತ್ಸಾ ಕೇಂದ್ರಕ್ಕೆ ಪ್ರಸಾದನನ್ನು ದಾಖಲಿಸಲಾಗಿತ್ತು. ತೀವೃ ಜ್ವರದಿಂದ ಬಳಲುತ್ತಿದ್ದ ಆತನನ್ನು ವೈದ್ಯರ ಶಿಫಾರಸ್ಸಿನಂತೆ ಧಾರವಾಡ ಎಸ್.ಡಿ.ಎಮ್.ಗೆ ದಾಖಲಿಸಲಾಗಿತ್ತಂತೆ ಆದರೇ ಚಿಕಿತ್ಸೆ ಫಲಕಾರಿಯಾಗದೆ ಆತ ಮರಣಹೊಂದಿದ್ದಾನೆಂದು ಹೇಳಲಾಗಿದೆ. ಡೆಂಘ್ಯೂ ಮಹಾಮಾರಿಗೆ ಪ್ರಸಾದ ಸಾವನ್ನಪ್ಪಿದ್ದಾನೆಂದು ಗ್ರಾಮಸ್ಥರ ಹಾಗೂ ಮೃತನ ಕುಟುಂಬದವರು ಮಾಡುವ ವಾದಕ್ಕೆ ಹಳಿಯಾಳ ತಾಲೂಕ ಆಸ್ಫತ್ರೆ ಸಾರಾಸಗಟಾಗಿ ತಳ್ಳಿಹಾಕುತ್ತಿದ್ದು ಹಳಿಯಾಳದಲ್ಲಿ ಡೆಂಘ್ಯು ಜ್ವರ ಇಲ್ಲವೆನ್ನುತ್ತಿದೆ. ತಾಲೂಕಿನ ಸಾಂಬ್ರಾಣಿ, ಕೇರವಾಡ, ನಿರಲಗಾ, ಮದ್ನಳ್ಳಿ, ಯಡೋಗಾ ಗ್ರಾಮಗಳಲ್ಲಿ ಡೆಂಘ್ಯುವಿನ ಲಕ್ಷಣಗಳುಳ್ಳ ಪ್ರಕರಣಗಳು ಕಾಣುತ್ತಿದ್ದು ಈ ಭಾಗದ ಜನ ಪಟ್ಟಣದ ಖಾಸಗಿ ಆಸ್ಫತ್ರೆಗಳಿಗೆ ಚಿಕಿತ್ಸೆಗೆ ದಾಖಲಾಗುತ್ತಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆ ಹುಬ್ಬಳ್ಳಿ ಧಾರವಾಡದ ಖಾಸಗಿ ಆಸ್ಫತ್ರೆಗೆ ರವಾನಿಸಲಾಗುತ್ತಿದೆ. ಪಟ್ಟಣದಲ್ಲಿಯೂ ಡೆಂಘ್ಯು ಜ್ವರದ ಲಕ್ಷಣಗಳು ಕಂಡು ಬಂದಿವೆ ಎಂದು ಪಟ್ಟಣದ ಖಾಸಗಿ ವೈದ್ಯರು ಹೇಳುತ್ತಿದ್ದು ಸಾರ್ವಜನೀಕರು ತಮ್ಮ ಸುತ್ತಮುತ್ತಲ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕು, ಶುದ್ದಿಕರಿಸಿದ, ಬಿಸಿ ನೀರು ಸೇವನೆ ಮಾಡಬೇಕು ಎಂದು ಸಲಹೆ ನೀಡಿರುವ ವೈದ್ಯರುಗಳು ಮಳೆಗಾಲದ ಈ ಸಂದರ್ಭದಲ್ಲಿ ಪಟ್ಟಣದಲ್ಲಿ ಮತ್ತೇ ಅಸ್ವಚ್ಚ ವಾತಾವರಣ ಕಾಣಸಿಗುತ್ತಿದ್ದು ಪುರಸಭೆಯವರು ಸ್ವಚ್ಚತೆಯತ್ತ ಹೆಚ್ಚಿನ ಗಮನ ಹರಿಸಿ ಕ್ರಿಮಿನಾಶಕ ಹಾಗೂ ಫಾಗಿಂಗ್ ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೇಗೆ ಪ್ರತಿಕ್ರಿಯಿಸಿದ ಹಳಿಯಾಳ ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಪಕ್ಕದ ದಾಂಡೇಲಿಯಲ್ಲಿ ಡೆಂಘ್ಯು ಜ್ವರದ ಲಕ್ಷಣವುಳ್ಳ 2ಪ್ರಕರಣಗಳು ಪತ್ತೆಯಾಗಿವೆ. ಹಳಿಯಾಳದ ಹವಗಿಯ ಯುವಕ ಡೆಂಘ್ಯು ರೋಗದಿಂದ ಸಾವಿಗಿಡಾಗಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಈ ಪ್ರಕರಣದ ಪರಿಶೀಲನೆ ಬಳಿಕ ಸತ್ಯಾಸತ್ಯತೆ ತಿಳಿಸಲಾಗುವುದು ಎಂದ ಅವರು ಸಾರ್ವಜನೀಕರು ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಬೇಕು. ಪುರಸಭೆ ಹಾಗೂ ಆರೋಗ್ಯ ಇಲಾಖೆಯಿಂದ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಕರೆ ನೀಡಿದರು.
Leave a Comment