ಹಳಿಯಾಳ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಧ್ಭವಿಸದಂತೆ ಅಧಿಕಾರಿಗಳು, ಪಿಡಿಓಗಳು ಕ್ರಮ ಕೈಗೊಳ್ಳಬೇಕು ಹಾಗೂ ಮಳೆಯಿಂದ ಹಾನಿಗೊಳಗಾದ ಶಾಲೆಗಳ ದುರಸ್ತಿ ಕಾರ್ಯವನ್ನು ಕೂಡಲೇ ಮಾಡುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಮಿನಿ ವಿಧಾನ ಸೌಧದ ಸಭಾಭವನದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಹಳಿಯಾಳ-ಜೋಯಿಡಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲಿಸಿ ಸಲಹೆ-ಸೂಚನೆಗಳನ್ನು ನೀಡಿದರು.
ಪಿಡಬ್ಲ್ಯೂಡಿ ಇಲಾಖೆ:- ಪ್ರಗತಿಯಲ್ಲಿರುವ ಮತ್ತು ನಡೆಯುತ್ತಿರುವ ಹಾಗೂ ಆಗಬೇಕಾಗಿರುವ ಕಾಮಗಾರಿಗಳ ಬಗ್ಗೆ ಎ.ಇ.ಇ ಆರ್.ಎಚ್. ಕುಲಕರ್ಣಿ ಮಾಹಿತಿ ನೀಡಿದರು. ಹಲವು ತಿಂಗಳುಗಳಿಂದ ಕಾಮಗಾರಿಗಳಿಗೆ ಚಾಲನೆ ನೀಡಿದರೂ ಅನುದಾನವಿದ್ದರು ಕೆಲವು ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಕಾಮಗಾರಿ ಪ್ರಾರಂಭಿಸುವಂತೆ ಹಾಗೂ ಹಾಳಾಗಿರುವ ರಾಜ್ಯ ಹೆದ್ದಾರಿಗಳು, ಪಟ್ಟಣ, ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡುವಂತೆ ಸೂಚಿಸಿದರು.
ಮಳೆಯಿಂದ ಹಾನಿಗೊಳಗಾದ ಶಾಲೆಗಳ ದುರಸ್ತಿ, ಶೌಚಾಲಯ, ಗ್ರಾಮೀಣ ಭಾಗದ ಕುಡಿಯುವ ನೀರಿನ ವ್ಯವಸ್ಥೆ ಕೂಡಲೇ ಸರಿ ಪಡಿಸುವಂತೆ ಜಿ.ಪಂ. ಎ.ಇ.ಇ ಹಳೇಮನಿಯವರಿಗೆ ಆದೇಶಿಸಿದ ದೇಶಪಾಂಡೆ ತಾಲೂಕು ಪಂಚಾಯತ ನೂತನ ಕಾರ್ಯಾಲಯ ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಿ ಎಂದರು.
ಕೃಷಿ ಇಲಾಖೆ:- ಹಳಿಯಾಳ ಇಲಾಖಾ ಅಧಿಕಾರಿ ನಾಗೇಶ ನಾಯ್ಕ್ ಮತ್ತು ಜೋಯಿಡಾ ಪಿ.ಆಯ್.ಮಾನೆ ತಾಲೂಕಿನ ಬೆಳೆ, ಮಳೆಗಳ ಸ್ಥಿತಿಗತಿಗಳ ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆ:- ತಾಲೂಕಿನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. ಅವಶ್ಯವಿರುವಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು ಕೆಲವು ಶಾಲೆಗಳ ಶೌಚಾಲಯಗಳ ರಿಪೇರಿ ಇದೆ ಎಂದು ಶಿಕ್ಷಣ ಸಂಯೋಜಕ ಡಿ.ಎಮ್. ನಾಡಗೌಡ ವರದಿ ನೀಡಿದರು. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗೆ ಸೂಚಿಸಿದರು.
ಹೆಸ್ಕಾಂ ಇಲಾಖೆ:- ಎ.ಇ.ಇ ಪುರುಷೋತ್ತಮ ಮಲ್ಯ ವರದಿ ನೀಡುತ್ತಾ ಪಟ್ಟಣ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಳೇ ತಂತಿ, ಕಂಬಗಳನ್ನು ಬದಲಾಯಿಸಲಾಗಿದೆ ಹೆಚ್ಚಿನ ಟಿ.ಸಿ ಗಳನ್ನು ಅಳವಡಿಸಲಾಗಿದೆ ಎಂದರು. ಗ್ರಾಮ ಪಂಚಾಯತ ನವರು ಪಂಪ್ ಸೆಟ್‍ಗಳಿಗೆ ವಿಧ್ಯುತ ಸಂಪರ್ಕ ಪಡೆದುಕೊಂಡಿದ್ದರು ಸಹ ಮೀಟರ ಅಳವಡಿಸಿಕೊಂಡಿಲ್ಲವೆಂದು ಹೇಳಿದಾಗ ಆಕ್ರೋಶಗೊಂಡ ಸಚಿವರು ತಾ.ಪಂ ಅಧಿಕಾರಿ ಮಹೇಶ ಕುರಿಯರರವರಿಗೆ ಸಂಭಂದಪಟ್ಟ ಪಿಡಿಒ ಗಳು 48 ಗಂಟೆಯೊಳಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಇನ್ನೂ ಉಸುಕಿನ ಸಮಸ್ಯೆ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು ಸಮಸ್ಯೆ ಬಗೆಹರಿಯಲಿದೆ ಎಂದ ಸಚಿವರು ಲ್ಯಾಂಡ್ ಆರ್ಮಿ, ಸ್ಲಂ ಬೋರ್ಡ, ನಿರ್ಮಿತಿ ಕೇಂದ್ರದ ಅಧಿಕಾರಿಗಳಿಂದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಕಳಪೆ ಕೆಲಸ ಮಾಡದೇ ಗುಣ ಮಟ್ಟದ ಕಾಮಗಾರಿ ನಡೆಸಬೇಕೆಂದರು.
ಸಭೆಯ ಪ್ರಾರಂಭದಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶರಯ್ಯ ನವರ 157ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಲಕ್ಷ್ಮೀ ಕೊರ್ವೇಕರ, ಮಹೇಶ್ರಿ ಮಿಶಾಳಿ, ತಾಪಂ ಅಧ್ಯಕ್ಷ ರಿಟಾ ಸಿದ್ದಿ, ಸದಸ್ಯ ದೇಮಾಣಿ ಶಿರೂಜಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸುಭಾಷ ಕೊರ್ವೇಕರ, ಸಹಾಯಕ ಆಯುಕ್ತ ಅಭಿಜನ್, ತಹಸಿಲ್ದಾರರಾದ ವಿದ್ಯಾಧರ ಗುಳಗುಳಿ, ಸಂಜಯ ಕಾಂಬ್ಳೆ, ಶೈಲೇಶ ಪರಮಾನಂದ ಇದ್ದರು.
Leave a Comment