ಹಳಿಯಾಳ: ಪರಿಸರ ಇಲಾಖೆಯಿಂದ ಅನುತಿ ಇಲ್ಲದೇ ಇರುವುದರಿಂದ ಮರಳು(ಉಸುಕು) ಸಮಸ್ಯೆ ಈಡಿ ರಾಜ್ಯದಲ್ಲಿ ತಲೆದೂರಿದೆ. ಸಮಸ್ಯೆ ಪರಿಹಾರಕ್ಕಾಗಿ ಕಾನೂನಾತ್ಮಕವಾಗಿ ಎಲ್ಲ ರೀತಿಯಿಂದ ಪ್ರಯತ್ನ ಮಾಡಲಾಗುತ್ತಿದ್ದು ಮುಂದಿನ ಒಂದು ವಾರದ ಅವಧಿಯಲ್ಲಿ ಈ ಮರಳು ಸಮಸ್ಯೆ ಬಗೆಹರಿಯಲಿದೆ ಎಂದು ಕಂದಾಯ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಹಳಿಯಾಳ ಪುರಸಭೆ ವ್ಯಾಪ್ತಿಯ 2017-18ನೇ ಸಾಲಿನ ಎಸ್‍ಎಫ್‍ಸಿ ವಿಶೇಷ ಅನುದಾನದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಹಳಿಯಾಳ ಪುರಸಭೆ ವ್ಯಾಪ್ತಿಯಲ್ಲಿ ಹೊಸ ಪುರಸಭೆ ಕಾರ್ಯಾಲಯ ಕಟ್ಟಡ, ಪುರಭವನ, ವಾಣಿಜ್ಯ ಸಂಕೀರ್ಣ ಮತ್ತು ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿ ನಡೆದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಜನಪ್ರತಿನಿಧಿಯಾದವರು ಎಲ್ಲ ವಿಚಾರಗಳನ್ನು ಅರಿತು ಮಾತನಾಡಬೇಕು. ಜನ ಸಾಮಾನ್ಯರಿಗೆ ತೊಂದರೆ ಆಗಿರುವುದನ್ನು ನಾನು ಅರಿತಿದ್ದೇನೆ. ಸಮಸ್ಯೆ ಬಗೆಹರಿಸಲು ನಾನು ಎಲ್ಲಿಯೂ ವಿಫಲನಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಹೇಳಿಕೆಗೆ ಸೂಕ್ಷ್ಮವಾಗಿ ತಿರುಗೇಟು ನೀಡಿದ ದೇಶಪಾಂಡೆ ಜಿಲ್ಲೆಯಲ್ಲಿ ಮಾತ್ರ ಮರಳು ಸಮಸ್ಯೆ ಇಲ್ಲ ಎಂಬುದನ್ನು ಅರಿತು ಮಾತನಾಡಬೇಕು. ವಿಶೇಷ ಕಾಳಜಿ ವಹಿಸಿ ಪರಿಸರ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಮರಳುಗಾರಿಕೆಗೆ ಬೇಕಾಗಿರುವ ಮ್ಯಾಪ್ ಈಗಾಗಲೇ ಸಿದ್ದವಾಗಿದ್ದು ಪರಿಸರ ಇಲಾಖೆ ದಿಲ್ಲಿಯಿಂದ ಅನುಮತಿ ಪಡೆಯುವ ಹಂತದಲ್ಲಿದ್ದು ಒಂದು ವಾರದಲ್ಲಿ ಮರಳು ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದ ಸಚಿವರು ಹಳಿಯಾಳ ಹಾಗೂ ಶಿರಸಿಯಲ್ಲಿ ಮರಳು ಡಿಪೋ ತೆರೆದು ಜನರ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಯಾವ ಪ್ರಭಾವಿಯೇ ಆಗಲಿ ಯಾರೇ ಆಗಲಿ ಸ್ವಾರ್ಥಕ್ಕಾಗಿ ಪರಿಸರದ ವಿರುದ್ದ ನಡೆಯಬಾರದು ಭವಿಷ್ಯದ ಮೇಲಾಗುವ ಪರಿಣಾಮಗಳನ್ನು ಅರಿತು ನಡೆಯಬೇಕು ಎಂದ ಸಚಿವರು ಪಟ್ಟಣದಲ್ಲಿ ಎನ್‍ಎ ಅನುಮತಿ ನೀಡುವಾಗ ನಿಯಮಗಳನ್ನು ಪಾಲಿಸಿ ಇಲ್ಲವೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ದೇಶಪಾಂಡೆ ಜನರ ನಂಬಿಕೆಗೆ ದ್ರೋಹ ಆಗದಂತೆ ಕೆಲಸ ನಿರ್ವಹಿಸಿ. ಮಂಜೂರಾದ ಕಾಮಗಾರಿಗಳನ್ನು ವಿಳಂಬವಾಗದಂತೆ ಕಾಲಮೀತಿಯೊಳಗೆ ಮಾಡಿ ಮುಗಿಸುವಂತೆ ಆದೇಶಿಸಿದರು.
ವೇದಿಕೆಯ ಮೇಲೆ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಲಕ್ಷ್ಮೀ ಕೊರ್ವೆಕರ, ಮಹೇಶ್ರಿ ಮಿಶಾಳಿ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಪುರಸಭೆ ಸದಸ್ಯರಾದ ಶಂಕರ ಬೆಳಗಾಂವಕರ, ಸುರೇಶ ತಳವಾರ, ಮೋಹನ ಮೆಲಗಿ, ಯಲ್ಲಪ್ಪಾ ಸಾಂಬ್ರೇಕರ, ಬ್ಲಾಕ್‍ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಪುರಸಭೆ ಇಂಜೀನಿಯರ್ ಹರೀಶ ಜಿಆರ್, ಆಡಳಿತಾಧಿಕಾರಿ ಹಾಗೂ ಸಹಾಯಕ ಕಮಿಷನರ್ ಅಭಿಜಿನ್ ಬಿ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಇತರರು ಇದ್ದರು.
Leave a Comment