ಬೆಳಗಾವಿ, ದಿ.17, 2018 – ರಾಜ್ಯದಿಂದ ಗೋವಾಕ್ಕೆ ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಲಘು ವಾಹನಗಳಲ್ಲಿ ಮೀನು ಸಾಗಣೆ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅವರು ಸೋಮವಾರ ಇಲ್ಲಿ ಹೇಳಿದ್ದಾರೆ.
ಗೋವಾ ಸರಕಾರವು ಇತ್ತೀಚೆಗೆ ಫಾರ್ಮಾಲಿನ್ ಅಂಶ ಹೆಚ್ಚಾಗಿರುತ್ತದೆ ಎನ್ನುವ ಕಾರಣ ಮುಂದೊಡ್ಡಿ ಅನ್ಯ ರಾಜ್ಯಗಳಿಂದ ತನ್ನಲ್ಲಿಗೆ ನಡೆಯುತ್ತಿರುವ ಮೀನು ಸಾಗಣೆಗೆ ನಿರ್ಬಂಧ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರಿಂದಾಗಿ ರಾಜ್ಯದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೀನು ವ್ಯಾಪಾರಿಗಳಿಗೆ ಅನಾನುಕೂಲವಾಗಿತ್ತು.
ಈ ಬಗ್ಗೆ ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ ದೇಶಪಾಂಡೆಯವರು, “ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಲಘು ವಾಹನಗಳಲ್ಲಿ ಗೋವಾಕ್ಕೆ ಮೀನು ಸಾಗಣೆ ಮಾಡಲು ನಿರ್ಬಂಧ ಇರುವುದಿಲ್ಲ. ಆದರೆ, ಟ್ರಕ್ಸ್ ಸೇರಿದಂತೆ ಭಾರಿ ವಾಹನಗಳಲ್ಲಿ ಆ ರಾಜ್ಯಕ್ಕೆ ಮೀನು ಸಾಗಣೆ ಮಾಡಬೇಕಾದರೆ ಎಫ್.ಡಿ.ಎ. ಅನುಮತಿ/ಪ್ರಮಾಣ ಪತ್ರ ಕಡ್ಡಾಯವಾಗಿದೆ,” ಎಂದು ತಿಳಿಸಿದ್ದಾರೆ.
ಇಂದಿನ ಮಾತುಕತೆಯಿಂದ ಸಣ್ಣ ಮತ್ತು ಮಧ್ಯಮ ಸ್ವರೂಪದ ಮೀನು ವ್ಯಾಪಾರೋದ್ಯಮಿಗಳಿಗೆ ಅನುಕೂಲವಾಗಿದೆ. ರಾಣೆ ಅವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ ಮತ್ತು ಈ ಎರಡೂ ರಾಜ್ಯಗಳ ಬಾಂಧವ್ಯದ ದೃಷ್ಠಿಯಿಂದ ಹಾಗೂ ಮೀನುಗಾರರ ಹಿತಾಸಕ್ತಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ ಸಚಿವರು ಈ ಬಗ್ಗೆ ನಿರ್ಬಂಧ ಸಡಿಲಿಸಲು ವಿಶೇಷ ಮುತುವರ್ಜಿ ವಹಿಸಿದ ರಾಣೆಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಮಸ್ಯೆ ಆರಂಭವಾದ ಕೂಡಲೇ ದೇಶಪಾಂಡೆಯವರು ಗೋವಾ ಸರಕಾರದೊಂದಿಗೆ ನಿರಂತರ ಮಾತುಕತೆಯನ್ನು ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Leave a Comment