
ಹಳಿಯಾಳ:- ಕಜಕಿಸ್ಥಾನ ದೇಶದಲ್ಲಿ ನಡೆದ 17 ವರ್ಷ ಒಳಗಿನ ಬಾಲಕರ 2019ರ “ಜೂನಿಯರ್ ಏಶಿಯನ್ ಚಾಂಪಿಯನ್ಶಿಪ್”ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಹಳಿಯಾಳದ ಗ್ರಾಮೀಣ ಕುಸ್ತಿಪಟು ಸೂರಜ ಸಂಜು ಅನ್ನಿಕೇರಿ ಸ್ಪರ್ದೆಯಲ್ಲಿ 3 ನೇ ಸ್ಥಾನ ಪಡೆದು ತಾಲೂಕು ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾನೆ.
ಕಳೆದ ಮೇ ತಿಂಗಳಿನಲ್ಲಿ ಹರಿಯಾಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೇಯಲ್ಲಿ ಬಾಲಕರ ಜೂನಿಯರ್ ಕುಸ್ತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಅಂತರಾಷ್ಟ್ರೀಯ ಕುಸ್ತಿಗೆ ಸೂರಜ ಆಯ್ಕೆಯಾಗಿದ್ದರು.
ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಅರ್ಲವಾಡ ಗ್ರಾಮದ ರಹವಾಸಿಯಾಗಿರುವ ಉದಯೋನ್ಮುಖ ಕುಸ್ತಿ ಪಟು ಸೂರಜ ಅನ್ನಿಕೇರಿ ಪೋಲಿಸ್ ಇಲಾಖೆಯಲ್ಲಿ ಪೋಲಿಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ಕುಸ್ತಿ ಪಟುವು ಆಗಿರುವ ಸಂಜು ಅನ್ನಿಕೇರಿ ಮಗನಾಗಿದ್ದಾನೆ. ಸೂರಜ ಪಟ್ಟಣದ ವಿಡಿ ಹೆಗಡೆ ವಿದ್ಯಾಲಯದಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಸದ್ಯ ಬಳ್ಳಾರಿಯ ಜೆಎಸ್ಡಬ್ಲೂ ತೊರಂಗಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಸೂರಜನಿಗೆ ತರಬೇತಿದಾರರಾದ ಟಿ ಮಂಜಪ್ಪ, ಎಸ್ ಶ್ರೀನಿವಾಸ ಹಾಗೂ ಶಂಕರಪ್ಪ ತರಬೇತಿ ನೀಡುತ್ತಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ರಾಜ್ಯ ಕುಸ್ತಿ ಸಂಘ, ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ವಿಡಿ ಹೆಗಡೆ ಶಿಕ್ಷಣ ಸಂಸ್ಥೆಯ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಆಗಿರುವ ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಶಿಕ್ಷಕರು ಹಾಗೂ ಹಳಿಯಾಳ ಪೋಲಿಸ್ ಇಲಾಖೆಯವರು ಅಭಿನಂದನೆ ಸಲ್ಲಿಸಿದ್ದಾರೆ.
Leave a Comment