
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯಕ್ಕೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಭೂಮಿ ಮಾನ್ಯ ಮಾಡದೆ ಅರಣ್ಯ ಇಲಾಖೆಯವರು ಹಾಗೂ ಸಂಬಂಧಪಟ್ಟ ಇಲಾಖೆಯವರು ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಬುಡಕಟ್ಟು ಸಿದ್ದಿ ಸಮುದಾಯದವರು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಅಧ್ಯಕ್ಷ ದಿಯೋಗ ಸಿದ್ದಿ ಮುಂದಾಳತ್ವದಲ್ಲಿ ನೂರಾರು ಸಿದ್ದಿ ಸಮುದಾಯದ ಮಹಿಳೆಯರು, ಪುರುಷರು ಪಟ್ಟಣದಲ್ಲಿ ಪ್ರತಿಭಟನಾ ಮೇರವಣಿಗೆ ನಡೆಸಲಾಯಿತು. ಬಳಿಕ ಮಿನಿ ವಿಧಾನಸೌಧದ ಎದುರು ಆಗಮಿಸಿ 1.30 ತಾಸಿಗೂ ಅಧಿಕ ಕಾಲ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ದ ಘೊಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೊಶವ್ಯಕ್ತಪಡಿಸಿದರು.
ಪ್ರತಿಭಟನಾ ನೀರತ ಸಿದ್ದಿ ಸಮುದಾಯದ ಜನರ ಅಹವಾಲನ್ನು ಆಲಿಸಲು ಹಾಗೂ ಮನವಿ ಪತ್ರ ಪಡೆಯಲು ಗ್ರೇಡ್ 2 ತಹಶೀಲ್ದಾರ್ ಜಿಟಿ ರತ್ನಾಕರ ಆಗಮಿಸಿದಾಗ ಪ್ರತಿಭಟನಾಕಾರರು ಅವರಿಗೆ ಮನವಿ ಪತ್ರ ನೀಡದೆ ತಾಲೂಕಾ ದಂಡಾಧಿಕಾರಿಗಳಾದ ವಿದ್ಯಾಧರ ಗುಳಗುಳೆ ಅವರೇ ಮನವಿ ಪತ್ರ ಸ್ವೀಕರಿಸಬೇಕೆಂದು ಪಟ್ಟು ಹಿಡಿದರು. ಬಳಿಕ ಗುಳಗುಳೆ ಅವರೇ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನಿಸುವುದಾಗಿ ಹೇಳಿದರು.
ಮನವಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯಕ್ಕೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಭೂಮಿ ಮಾನ್ಯ ಮಾಡುವ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ರಿಟ್ ಅರ್ಜಿ ಪರಿಶೀಲಿಸಿ 28/02/2019 ರಂದು ನೀಡಿದ ಮಧ್ಯಂತರ ತೀರ್ಪು, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿ, ರಾಜ್ಯ ಸರ್ಕಾರದ ಕಾನೂನು ಇಲಾಖೆಯ ಅಭಿಪ್ರಾಯ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪತ್ರ ಹಾಗೂ ರಾಜ್ಯ ಸರ್ಕಾರದ ಆದೇಶ ಸಂಖ್ಯೆಯ ಬಗ್ಗೆ ಉಲ್ಲೇಖಿಸಲಾಗಿದೆ.
ಈ ಉಲ್ಲೇಖಗಳ ಪ್ರಕಾರ ಸಿದ್ದಿ ಬುಡಕಟ್ಟು ಸಮುದಾಯಕ್ಕೆ ಪ್ರತಿಯೊಂದು ಕುಟುಂಬಕ್ಕೆ 4 ಹೆಕ್ಟರ ಭೂಮಿ, ಹಕ್ಕು ಪತ್ರ ನೀಡಿ ಬದುಕಲು ಅವಕಾಶ ಕಲ್ಪಿಸಿ ಕೋಡಬೇಕಾಗಿತ್ತು. ಆದರೆ ಸುಪ್ರಿಂ ಕೋರ್ಟ ಮತ್ತು ಸರ್ಕಾರದ ಆದೇಶವನ್ನು ಉಲ್ಲಂಘಣೆ ಮಾಡಿ ಸಾಗುವಳಿ ಮಾಡುತ್ತಿರುವ ಭೂಮಿಯಲ್ಲಿ ಅರಣ್ಯ ಇಲಾಖೆಯವರು ಸಸಿಗಳನ್ನು ನೇಡುವುದು, ಬೆಳೆದ ಫಸಲನ್ನು ಮಾರಣಾಂತಿಕ ಔಷಧಿ ಹೋಡೆದು ನಾಶ ಮಾಡುವುದು, ಕೆಲವರ ಜಿ.ಪಿ.ಎಸ್ ಮಾಡದಿರುವುದು, ಜಿ.ಪಿ.ಎಸ್ ಮಾಡುವ ಸಮಯದಲ್ಲಿ 13-12-2005 ರ ನಂತರ ಮಾಡಿದ್ದು ಎಂದು ಬರೆದು ವಿನಾಃಕಾರಣ ಸಿದ್ದಿ ಸಮುದಾಯದವರಿಂದ ಭೂಮಿ ಕೈ ತಪ್ಪಿ ಹೊಗುವಂತೆ ಮಾಡುವುದು ಮಾಡುತ್ತಾ ಕಿರುಕುಳ ನೀಡುವ ಪ್ರವೃತ್ತಿಯನ್ನು ಅರಣ್ಯ ಇಲಾಖೆಯವರು ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.

ಅರಣ್ಯ ಇಲಾಖೆಯ ತಾರತಮ್ಯದ ನೀತಿಯಿಂದ ಬುಡಕಟ್ಟು ಸಮುದಾಯದ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬುಡಕಟ್ಟು ಸಿದ್ದಿ ಸಮುದಾಯದ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ ಎಂದಿರುವ ಪ್ರತಿಭಟನಾಕಾರರು 2006 ರ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಬುಡಕಟ್ಟು ಸಮುದಾಯ 13-12-2005 ರ ಪೂರ್ವದ ಯಾವುದೇ 2 ದಾಖಲೆಗಳು ಸಲ್ಲಿಸಿದಲ್ಲಿ ಇವರಿಗೆ ವೈಯಕ್ತಿಕ ಹಕ್ಕು ಅರಣ್ಯದಲ್ಲಿ ಕೀರು ಉತ್ಪತ್ತಿಗಳ ಸಂಗ್ರಹ, ಮಾರಾಟ ಹಕ್ಕು ಹಾಗೂ ಸಾಮೂಹಿಕ ಹಕ್ಕನ್ನು ಮಾನ್ಯ ಮಾಡಿ ಇವರು ಕಾಡಿನ ಮಧ್ಯದಲ್ಲಿ ನೆಮ್ಮದಿಯ ಬದುಕನ್ನು ಬದುಕಲು ಅವಕಾಶ ಕಲ್ಪಿಸಿದ್ದು ಈ ಎಲ್ಲಾ ಅವಕಾಶಗಳನ್ನು ಗಾಳಿಗೆ ತೂರಿ ಅರಣ್ಯ ಇಲಾಖೆಯವರು ಸರಿಯಾಗಿ ಪರಿಶೀಲನೆ ಮಾಡದೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಲಾಗಿದೆ.
ಸಮಸ್ಯೆ ಕೂಡಲೇ ಬಗೆಹರಿಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಮರಣಾಂತಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವೇದಿಕೆ ಅಧ್ಯಕ್ಷ ದಿಯೋಗ ಸಿದ್ದಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಪ್ರಮುಖರಾದ ಮಿಂಗೆಲ್ ಸಿದ್ದಿ, ರೆಹಮಾನಸಾಬ ಸಿದ್ದಿ, ಇಮಾಮಹುಸೇನ ನಾಯ್ಕ, ಬಿಯಾಮಾ ನಾಯ್ಕ ಸಿದ್ದಿ, ಮೇರಿ ಸಿದ್ದಿ, ಸುನಿಲ ಸಿದ್ದಿ ಇದ್ದರು.
Leave a Comment