ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನಾದ್ಯಂತ ರೈತರು ನೆರೆ ಹಾವಳಿಯಿಂದ ಸಂತ್ರಸ್ಥರಾಗಿದ್ದು, ವಿಶೇಷವಾಗಿ ಹಳ್ಳದ ದಂಡೆಯ ಸಮೀಪದಲ್ಲಿರುವ ರೈತರು ಸಾಕಷ್ಟು ಹಾನಿ ಅನುಭವಿಸಿರುವ ಕಾರಣ ಕೂಡಲೇ ಪರಿಹಾರ ಒದಗಿಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹಳಿಯಾಳ ತಾಲೂಕಾ ಕಬ್ಬು ಬೆಳೆಗಾರ ಸಂಘದವರು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಹೆಸರಿನಲ್ಲಿದ್ದ ಮನವಿ ಪತ್ರವನ್ನು ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಸಲ್ಲಿಸುವ ಮೂಲಕ ಶೀಘ್ರ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಮನವಿಯಲ್ಲಿ ಬೆಳೆ, ಮೇವಿನ ಬಣವೆಗಳು, ಮನೆಗಳು, ರೈತರು ಓಕ್ಕಲುತನಕ್ಕೆ ಉಪಯೋಗಿಸುವ ಸಲಕರಣೆಗಳು ಮತ್ತು ಸಾವಿರಾರು ಪಂಪ್ಸೆಟಗಳು ಹಾಗೂ ಪೈಪಗಳು, ಪೇನಲ್ ಬೋರ್ಡಗಳು ಮತ್ತು ರೈತರ ಮನೆಯಲ್ಲಿರುವ ಪಾತ್ರೆ, ರಸಗೊಬ್ಬರ ಕಾಳು, ದವಸ ಧಾನ್ಯಗಳು ನೆರೆ ಪ್ರವಾಹದ ರಭಸಕ್ಕೆ ಕೊಚ್ಚಿ ನೀರು ಪಾಲಾಗಿದ್ದು ರೈತರು ಜೀವನೋಪಾಯ ಮಾಡುವುದೇ ಕಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರು ಬೆಳೆದ ಗೋವಿನ ಜೋಳ, ಹತ್ತಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಕೂಡ ಬೇರು ಮತ್ತು ಮಣ್ಣು ಸಮೇತ ಕೊಚ್ಚಿ ಹೋಗಿದ್ದು, ಈ ನಷ್ಟವನ್ನು ಭರಿಸಲು ಸಾಧ್ಯವಾಗದೇ ರೈತರು ಮಾನಸಿಕವಾಗಿ ನೊಂದು ಆತ್ಮಹತ್ಯೆಯಂತಹ ಘಟನೆಗಳಿಗೆ ಬಲಿಯಾಗುವ ಪೂರ್ವದಲ್ಲಿ ತಾವುಗಳು ಸರ್ಕಾರದ ಮೇಲೆ ಒತ್ತಡ ತಂದು ಈ ಎಲ್ಲಾ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಿ ಕೋಡಬೇಕು ಅಲ್ಲದೇ ಕೂಡಲೇ ಸೂಕ್ತ ಪರಿಹಾರ ದೊರಕಿಸುವಲ್ಲಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಮನವಿ ಸಲ್ಲಿಸುವಾಗ ರೈತ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಪ್ರಮುಖರಾದ ಅಶೋಕ ಮೇಟಿ, ಪುಂಡ್ಲಿಕ ಗೋಡಿಮನಿ, ಜಯರಾಮ ಕಳ್ಳಿಮನಿ, ರಾಮದಾಸ ಬೆಳಗಾಂವಕರ, ಯಲ್ಲಪ್ಪಾ ಕಳ್ಳಿಮನಿ, ಪಿಶಪ್ಪಾ ಸಿಂಗನೊಳಕರ, ಸಾತೋರಿ ಗೊಡಿಮನಿ, ಲಕ್ಷ್ಮಣ ಪಾಟೀಲ್ ಇದ್ದರು.
Leave a Comment