
ಹಳಿಯಾಳ:- ರಾಜಕೀಯ ಚುನಾವಣೆಗೆ ಸೀಮಿತವಾಗಿರಬೇಕು, ಅಭಿವೃದ್ದಿ ವಿಷಯ ಬಂದಾಗ ಎಲ್ಲರೂ ಕೂಡಿ ಪರಸ್ಪರರ ಸಹಕಾರದಲ್ಲಿ ಕೆಲಸಗಳು ಮಾಡಬೇಕು. ತಪ್ಪು ದಾರಿ ಹಿರಿದರೇ ಟಿಕೆ ಟಿಪ್ಪಣಿ ಮಾಡಲೇಬೇಕು ಆದರೇ ಅಭೀವೃದ್ದಿಯ ವಿಚಾರಧಾರೆ ಇಲ್ಲದೇ ಬೆಳಿಗ್ಗೆಯಿಂದ ರಾತ್ರಿವರೆಗೂ ಟಿಕೆ ಟಿಪ್ಪಣಿಯನ್ನೇ ಮಾಡುತ್ತಿದ್ದರೇ ಅದಕ್ಕೆ ಬೆಲೆ ಇರುವುದಿಲ್ಲ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಬಗ್ಗೆ ಟಿಕಾಪ್ರಹಾರ ನಡೆಸಿದರು.
ಜನರ ಅಪೇಕ್ಷೆ ಮತ್ತು ಬೇಡಿಕೆಯಂತೆ ಪ್ರಗತಿಹೊಂದುತ್ತಿರುವ ಹಳಿಯಾಳಕ್ಕೆ ಒಳಚರಂಡಿ ಕಾಮಗಾರಿ ಮಂಜೂರಿ ಮಾಡಲಾಗಿದೆ. ೭೬ ಕೋಟಿ ರೂ. ವೆಚ್ಚದ ಈ ಯೋಜನೆಗೆ ಈಗಾಗಲೇ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಅಭಿವೃದ್ದಿಯ ಕಾಮಗಾರಿಗಳು ನಡೆಯುವಾಗ ಪ್ರತಿಯೊಬ್ಬರು ಕಾವಲುಗಾರರಂತೆ ಕೆಲಸ ಮಾಡಿದಾಗಲೇ ಗುಣಮಟ್ಟದ ಕಾಮಗಾರಿಗಳು ನಡೆಯುತ್ತವೆ ಎಂದರು.
ಒಂದೆಡೆ ದೇಶದ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ವಚ್ಚತಾ ಆಂದೋಲನ, ಬಯಲು ಶೌಚಮುಕ್ತದ ಬಗ್ಗೆ ಮಾತನಾಡುತ್ತಾರೆ ಆದರೇ ಅವರದೇ ಪಕ್ಷದ ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಒಳಚರಂಡಿ ಯೋಜನೆಯ ಬಗ್ಗೆ ಅಪಸ್ವರ ಎತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೀಸಿದ ದೇಶಪಾಂಡೆ ಜನಾಭಿಪ್ರಾಯದ ವಿರುದ್ದ ನಾನಿಲ್ಲ ಆದರೇ ಜನರಿಗೆ ಬೇಕಾಗಿರುವ ಈ ಯೋಜನೆ ಬೇಡ ಎನ್ನುವ ಹೆಗಡೆ ಅವರು ಅವರದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದು ಬೇಕಿದ್ದರೇ ಯೋಜನೆ ರದ್ದುಪಡಿಸಿಕೊಂಡು ಬರಲಿ ಬಳಿಕ ಜನರಿಗೆ ಉತ್ತರ ನೀಡಲಿ ಅಲ್ಲದೇ ಕಾಮಗಾರಿಯ ಬಗ್ಗೆ ವಿನಾಃಕಾರಣ ಅಪಸ್ವರ ಎತ್ತಿರುವವರಿಗೆ ಏನೋ ಬೇಕಾದಂತೆ ತೊರುತ್ತಿದೆ ಎಂದು ದೇಶಪಾಂಡೆ ಆಪಾದಿಸಿದರು.
ಅಧಿಕಾರಿಗಳ ಮೇಲೆ ಮಾಜಿ ಶಾಸಕರು ಒತ್ತಡ ಹೇರುತ್ತಿದ್ದಾರೆ ಅಲ್ಲದೇ ವರ್ಗಾವಣೆ ಮಾಡಿಸುವ ಬೇದರಿಕೆ ಹಾಕುತ್ತಿರುವ ಬಗ್ಗೆ ಕೂಡ ತಮ್ಮ ಗಮನಕ್ಕೆ ಬಂದಿದೆ ಅಭಿವೃದ್ದಿ ಬೇಕಾದವರು ಈ ರೀತಿ ಮಾಡುವುದಿಲ್ಲ ಎಂದ ದೇಶಪಾಂಡೆ ಹಳಿಯಾಳದ ಆರ್.ಎಸ್.ಎಸ್ ಬ್ಯಾಂಕ ಕುರಿತು ಸರ್ಕಾರಕ್ಕೆ ದೂರು ನೀಡಿರುವುದನ್ನು ಖಂಡಿಸಿದರು. ಸಾಧ್ಯವಾದರೇ ಹಳಿಯಾಳದ ಬಿಜೆಪಿ ಮುಖಂಡರ ಧೊರಣೆ ಕುರಿತು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೂ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಮಾಜಿ ವಿಧಾನಪರಿಷತ್ ಸದಸ್ಯ ವಿಡಿ ಹೆಗಡೆ ಅವರ ಬಗ್ಗೆ ಗುಣಗಾನ ಮಾಡಿದ ದೇಶಪಾಂಡೆ ಅಭಿವೃದ್ದಿಯ ಪರ ಇರುವವರ ಹಾಗೂ ಕೆಲಸ ಮಾಡಿದವರನ್ನು ಯಾವತ್ತು ನೆನೆಸಿಕೊಳ್ಳಬೇಕು ಎಂದರು.
ನೆರೆಯಿಂದ ರಾಜ್ಯದಲ್ಲಿ ೩೫ ಸಾವಿರ ಕೋಟಿಗೂ ಹೆಚ್ಚು ಹಾನಿಯಾಗಿದ್ದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ೧೨೦೦ಕೋಟಿ ಸಾಕಾಗುವುದಿಲ್ಲ ಆದ್ದರಿಂದ ತಕ್ಷಣಕ್ಕೆ ೫ ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ದೇಶಪಾಂಡೆ ಸರ್ಕಾರ ತಕ್ಷಣ ನಿರಾಶ್ರಿತರಿಗೆ ಹಾಗೂ ರೈತರಿಗೆ ನ್ಯಾಯಬದ್ದವಾಗಿ ಪರಿಹಾರ ಹಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ಹಳಿಯಾಳ ಮತ್ತು ಜೋಯಿಡಾದಲ್ಲಿ ಕೆರೆ, ಬಾಂದಾರಗಳ ಹಾಗೂ ಏತ ನೀರಾವರಿ ಯೋಜನೆಯ ಪುನರುಜ್ಜೀವನಕ್ಕಾಗಿ ೨೦೧೯-೨೦ನೇ ಸಾಲಿಗೆ ೭೦ ಕಾಮಗಾರಿಗಳಿಗೆ ೨೧ ಕೋಟಿ ಅನುದಾನ ಮತ್ತು ಪರಿಶಿಷ್ಠ ಜಾತಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲೋನಿಗಳನ್ನು ಅಭಿವೃದ್ದಿ ಪಡಿಸಲು ೧ಕೋಟಿ ಅನುದಾನವನ್ನು ಸರ್ಕಾರ ಮಂಜೂರಿ ಮಾಡಿದೆ ಎಂದು ದೇಶಪಾಂಡೆ ಮಾಹಿತಿ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಜಿಪಂ ಸದಸ್ಯ ಕೃಷ್ಣಾ ಪಾಟೀಲ್ ಇದ್ದರು.


Leave a Comment