• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಕ್ಕಳೆಂಬ ಸೃಜನಶೀಲ ವ್ಯಕ್ತಿತ್ವದ ಜೊತೆಗೆ

December 18, 2019 by Ganesh Joshi Leave a Comment

Family, looking, happiness,

ಮನಸ್ಸಿನಲ್ಲಿ ಏನೇನೂ ಕಲ್ಮಶವಿಲ್ಲದೆ ಎಲ್ಲದರಲ್ಲಿ ಹೊಸತು ಹುಡುಕುವ ಹಾಗೂ ಹುಡುಕಿ ಕೆದಕಿ ಪ್ರಶ್ನಿಸುವ ಆ ಮುಗ್ದ ಮನದ ಮಕ್ಕಳಲ್ಲಿ ಅದೆಷ್ಟೋ ಸೃಜನಶೀಲ ಭಾವನೆಗಳು ಹುದುಗಿರುತ್ತವೆ. ಅದಕ್ಕಾಗಿಯೇ “ಮಕ್ಕಳೆಂದರೆ ದೇವರ ತೋಟದಲ್ಲಿ ಅರಳಿದ ಹೂವುಗಳು” ಎಂದಿದ್ದಾರೆ ಹಿರಿಯರು. ಮಗುವಿನ ಒಳಗಿನ ಸೃಜನಾತ್ಮಕತೆಗೆ ನಾವೆಲ್ಲ ಮನ ಸೋತವರೇ ಸರಿ. ಆದರೆ ಮಕ್ಕಳ ಸೃಜನಶೀಲತೆಯನ್ನು ಬೆಳೆಸುವ ಜನರಿಗಿಂತ ಅದನ್ನು ಮೊಟಕುಗೊಳಿಸುವವರೇ ಹೆಚ್ಚು . ಅವರವರ ಸಾಮಥ್ರ್ಯವನ್ನು ಅರಿತು ಅದಕ್ಕೆ ನೀರೆಯುವವರು ಎಷ್ಟು ಜನರಿದ್ದಾರೆ ಹೇಳಿ? ನಮ್ಮ ಕನಸಿನಂತೆ ಮಕ್ಕಳು ಬೆಳೆಯಬೇಕೆಂಬ ಪಾಲಕರ ಮಹದಾಸೆಯ ಜೊತೆಗೆ ರ್ಯಾಂಕ್‍ಗಳಿಕೆಗಷ್ಟೇ ಸೀಮಿತವಾಗಿಸುವ ಆ ಶಾಲಾ ಪರಿಸರದ ನಡುವೆ ಮಕ್ಕಳ ಕಲ್ಪನಾಶಕ್ತಿಯನ್ನು ವಿಸ್ತರಿಸುವ ಜೊತೆಗೆ ಅವರ ಕೌಶಲವನ್ನು ಅರಿತು ಪೋಷಿಸುವುದು ಹೇಗೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಮಕ್ಕಳ ಮನಸ್ಥಿತಿ ಅರಿಯುವುದು ಹೇಗೆ? ಅವರೊಳಗಿರುವ ಸೃಜನಶೀಲ ಗುಣವನ್ನು ಮುನ್ನೆಲೆಗೆ ತರುವುದು ಹೇಗೆ? ಎಂಬ ಹಲವು ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ಇನ್ನೂ ಸಿಕ್ಕಿಲ್ಲ. ಪಾಲಕರಿಗೂ ಹಾಗೂ ಶಿಕ್ಷಕರಿಗೂ ಈ ಬಗ್ಗೆ ಸೂಕ್ತವಾದ ದಾರಿಯೊಂದು ಸಿಕ್ಕಿದರೆ…! ಆ ದಾರಿಯಲ್ಲಿ ಎಲ್ಲರೂ ಪ್ರಯತ್ನಿಸಿದರೆ ಮಗುವೊಂದು ಸೃಜನಶೀಲತೆಯ ಖನಿಯಾಗುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ?

ಹೊಟೆಲ್ ಒಂದರಲ್ಲಿ ಕಂಡ ದೃಷ್ಯವೊಂದರ ಮೂಲಕ ಮಕ್ಕಳ ಸೃಜನಾತ್ಮಕತೆಯ ಪೋಷಣೆಯ ಹಾಗೂ ಸೃಜನಶೀಲತೆಯನ್ನು ಮೊಟಕುಗೊಳಿಸುವ ಅಂಶಗಳನ್ನು ಇಲ್ಲಿ ಹೇಳಬಯಸುತ್ತೇನೆ. ಮೊನ್ನೆ ಹೊಟೆಲ್ ಒಂದಕ್ಕೆ ಸ್ನೇಹಿತರ ಜೊತೆ ಹೋಗಿ ಕುಳಿತಿದ್ದೆ. ಪಕ್ಕದ ಮೇಜಿನಲ್ಲಿ ಚಿಕ್ಕ ಮಗುವೊಂದು ಮೊದಲ ಬಾರಿ ತನ್ನ ತಂದೆ-ತಾಯಿ, ಚಿಕ್ಕಪ್ಪ-ಚಿಕ್ಕಮ್ಮರೊಂದಿಗೆ ಹೋಟೆಲ್‍ಗೆ ಊಟಕ್ಕೆ ಬಂದಿದ್ದಾಳೆ. ಹೊಟೆಲ್ ಎಂದಮೇಲೆ ಕೇಳಬೇಕೇ? ಮೇಜಿನ ಮೇಲೆ ತಟ್ಟೆ, ಗಾಜಿನ ಲೋಟದಲ್ಲಿ ನೀರು ಕೊಟ್ಟು ಊಟಕ್ಕಾಗಿ ಸಂಪೂರ್ಣ ಹಸಿವಾಗುವ ವರೆಗೂ ಕಾಯಿಸುತ್ತಾನೆ ಇರುತ್ತಾರೆ. ನಂತರ ನಿಧಾನಕ್ಕೆ ಒಂದೊಂದೆ ಆರ್ಡರ್ ನಿಮ್ಮ ಟೇಬಲ್ ಸೇರುತ್ತೆ. ಈ ಮಗುವಿಗೂ ಕಾದು ಸ್ವಲ್ಪ ಬೇಸರ ಬರುವಷ್ಟರಲ್ಲಿ ಹೋಟೆಲ್‍ನ ವೇಟರ್‍ನೊಬ್ಬ ಒಂದು ಬಟ್ಟಲಿನಲ್ಲಿ ಟೊಮೆಟೊ ಸಾಸ್ ಅನ್ನು ತಂದಿಟ್ಟ. ಮಗುವಿಗೆ ಮಹದಾನಂದ. ತಾಯಿಗೆ ಹೇಳಿ ತಟ್ಟೆಗೆ ಸಾಸ್ ಹಾಕಿಸಿಕೊಂಡಳು. ಸ್ವಲ್ಪ ನೆಕ್ಕಾಯಿತು. ಈಗ ಬೇಸರವಾಗಲು ಪ್ರಾರಂಭಿಸಿತು. ಒಂದು ಫೋರ್ಕ್ ತೆಗೆದುಕೊಂಡು, ಆ ಸಾಸ್‍ನಲ್ಲಿ ಆಟವಾಡಲು ಪ್ರಾರಂಭಿಸಿದಳು, ಪ್ಲೇಟ್‍ನಲ್ಲಿ ಸಾಸ್‍ನ ಚಿತ್ತಾರ ಮೂಡಿಸಲು ಶುರುವಾಯಿತು. ಆದರೆ ಅಲ್ಲಿ ನಡೆದ ಘಟನಾವಳಿಗಳು ಮಾತ್ರ ಗಮನಾರ್ಹ ಹಾಗೂ ಮಗುವಿನ ಮೇಲೆ ಆ ಘಟನೆ ಬೀರಿದ ಪ್ರಭಾವದ ಪರಿ ನನ್ನ ಕಣ್ಣುತೆರೆಸಿತು.

ಮಗು ಸಾಸ್ ಚಿತ್ತಾರ ಬಿಡಿಸುತ್ತಿದ್ದುದನ್ನು ಗಮನಿಸುತ್ತಲೇ ತಾಯಿ ಬೈಯುವುದಕ್ಕೆ ಪ್ರಾರಂಭಿಸಿದರು, ಆ ಮಗುವಿನ ಮುಖ ನೋಡಿದರೆ ಅಯ್ಯೋ ನಾನೇನೋ ಅಪರಾಧ ಮಾಡಿಬಿಟ್ಟೆನೆಂಬ ಭಾವನೆ ಮಗುವಿನ ಕಂಗಳಲ್ಲಿ ಕಾಣಲು ಪ್ರಾರಂಭಿಸಿತು. ಅದೇ ಸಮಯಕ್ಕೆ ಚಿಕ್ಕಮ್ಮ ಅಮ್ಮನ ಮಾತುಗಳನ್ನು ತಡೆದಳು, ಮಗುವಿನ ಮುಖವನ್ನೊಮ್ಮೆ ನೋಡಿದಳು, ಕೈಗಳಿಂದ ಮಗುವಿನ ಗಲ್ಲಕ್ಕೆ ಮೃದು ಸ್ಪರ್ಶ ನೀಡಿ ಮಾತು ಪ್ರಾರಂಭಿಸಿದಳು “ಪುಟ್ಟ…. ಪ್ಲೇಟ್‍ನಲ್ಲಿ ‘ಸಾಸ್’ ನಿಂದ ಎಷ್ಟು ಚೆಂದದ ಡಿಸೈನ್ ಮಾಡಿದ್ದೀಯಲ್ಲ..! ಎಂದು ಪ್ರಶಂಸೆಯ ಮಾತುಗಳನ್ನಾಡಿದಳು. ಏನದು? ಎಂದು ಪ್ರಶ್ನಿಸುವಷ್ಟರಲ್ಲಿಯೇ ಮಗುವಿಗೆ ಸಂತಸವಾಗಿ, ಸಾಸ್‍ನಲ್ಲಿ ಗೀಚಿದ ಬಗ್ಗೆ ಆ ಚಿತ್ರಗಳನ್ನು ವಿವರಿಸುತ್ತಾ ಅದೆಷ್ಟೋ ಕತೆಗಳನ್ನು ಹೇಳಿಯೇ ಬಿಟ್ಟಳು. ನಿಜವಾಗಿ ಅವಳ ಕಲ್ಪನೆ ನೋಡಿ ಎಲ್ಲರೂ ದಂಗಾಗಿಬಿಟ್ಟರು.

ಇದು ಕೇವಲ ಒಬ್ಬರ ಜೀವನದ ಘಟನೆಗಳಲ್ಲ, ಎಲ್ಲ ಮಕ್ಕಳ ಜೀವನದಲ್ಲಿ ನಡೆಯುವ ಸಹಜ ಘಟನೆ. ಸೃಜನಶೀಲತೆ ಬೆಳೆಯುವ ಅವಕಾಶಗಳನ್ನು ಚಿವುಟಿಹಾಕುವವರೇ ಹೆಚ್ಚು. ಮಕ್ಕಳ ಚಟುವಟಿಕೆಗಳನ್ನು ‘ಸೃಜನಶೀಲ’ ದೃಷ್ಟಿಯಿಂದ ನೋಡಿ ಪ್ರೋತ್ಸಾಹಿಸಿ ನೀರೆರೆದು ಪೋಷಿಸುವವರು ವಿರಳಾತಿವಿರಳ.

IMG 20191213 WA0004

ಮಗುವಿನಲ್ಲಿ ಕಲ್ಪನೆಗಳಿರುತ್ತವೆ, ಸ್ವಂತಿಕೆ ಇರುತ್ತದೆ, ಹೊಸ ಚಿಂತನೆಗಳನ್ನು ವಿವಿಧ ಕಲ್ಪನೆಗಳ ಮೂಲಕ ಹೊರತರುವ ಸಾಮಥ್ರ್ಯ ಇರುತ್ತದೆ, ಮಗುವಿನ ಪ್ರಕ್ರಿಯೆಯಿಂದಾಗಿ ಮೌಲ್ಯಯುತವಾದ ಫಲಿತಾಂಶ ಉತ್ಪಾದನೆ ಆಗುವಂತಿರುತ್ತವೆ ಆದರೆ ಮಗುವಿಗೆ ಬೇಕಾದದ್ದು ಮಾಡುವ ಅವಕಾಶವನ್ನು ನಾವು ಮಾಡಿಕೊಟ್ಟಿಲ್ಲ ಎನಿಸುತ್ತದೆ. ನಮ್ಮ ಕನಸನ್ನು ಮಗು ಸಾಕಾರಮಾಡಬೇಕೆಂದು ನಾವು ಪ್ರಯತ್ನಿಸುತ್ತಿದ್ದೇವೆಯೇ ಹೊರತು ಮಗುವಿನ ಕನಸಿನ ಬಗ್ಗೆ ಚಿಂತನೆಯನ್ನೇ ಮಾಡದಿರುವುದು ವಿಪರ್ಯಾಸ ಅಲ್ಲವೇ? ಸೃಜನಶೀಲತೆ ಎಲ್ಲ ಮಾನವರಲ್ಲಿ ಸಹಜವಾಗಿ ಕಂಡುಬರುವ ಗುಣವೇ ಎಂದು ತಿಳಿಯಲು ಅಧ್ಯಯನಗಳು ಸಾಕಷ್ಟು ಪ್ರಯತ್ನಿಸಿವೆ. ಒಂದು ಸಿದ್ಧಾಂತದ ಪ್ರಕಾರ ಎಲ್ಲ ಜನರಿಗೂ ಸೃಜನಶೀಲ ಸಾಮಥ್ರ್ಯ ಇದ್ದು, ಸರಿಯಾದ ವಾತಾವರಣ ಕಲ್ಪಿಸಿದಲ್ಲಿ, ಜ್ಞಾನ ಹಾಗೂ ಕೌಶಲಗಳ ಸಹಾಯದಿಂದ ಆ ಸೃಜನಶೀಲತೆ ಬೆಳಕಿಗೆ ಬರಲು ಸಾಧ್ಯ.

ಯಾಕೆ ಜಗತ್ತಿನಲ್ಲಿ ಕೆಲವರಷ್ಟೇ ಸೃಜನಶೀಲರಾಗಿರುತ್ತಾರೆ? ಎಂಬುದಕ್ಕೆ ಸಮಂಜಸವಾದ ಉತ್ತರವಿಲ್ಲ. ಹಾಗಾದರೆ ಬುದ್ಧಿವಂತಿಕೆ ಮತ್ತು ಸೃಜನಶೀಲತೆ ಎರಡೂ ಒಂದೆಯೇ ಎಂದು ನೋಡಿದರೆ ‘ಇಲ್ಲ’ ಎನ್ನುತ್ತದೆ ಸಂಶೋಧನೆ. ಇದನ್ನು ತಿಳಿಯಲು ನಡೆಸಿದ ಅಧ್ಯಯನಗಳಲ್ಲಿ ಬುದ್ಧಿವಂತಿಕೆಯ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿದ ಎಲ್ಲರೂ ಸೃಜನಶೀಲರಾಗಿರಲಿಲ್ಲ. ಎಲ್ಲ ಮಕ್ಕಳೂ ಬೆಳೆದು ನ್ಯೂಟನ್‍ನಂತೆ ಮರದ ಮೇಲಿನಿಂದ ಸೇಬುಹಣ್ಣು ಬೀಳುವುದನ್ನು ನೋಡಿ ಗುರುತ್ವಾಕರ್ಷಣಾ ಶಕ್ತಿ ಕಂಡು ಹಿಡಿಯಲಿಕ್ಕಿಲ್ಲ. ಆದರೆ ‘ಸೃಜನಶೀಲತೆ’ ಎನ್ನುವುದು ಪ್ರತಿಯೊಂದು ಮಗುವಿನಲ್ಲೂ ಇರುತ್ತದೆ. ಆ ಸೃಜನಶೀಲತೆ ಕೇವಲ ಪ್ರಸಿದ್ಧ ಕಲಾವಿದರಾಗುವುದಕ್ಕೆ, ಅಸಾಧಾರಣವಾದದ್ದನ್ನು ಕಂಡುಹಿಡಿಯುವ ವಿಜ್ಞಾನಿಯಾಗುವುದಕ್ಕೆ ಸೀಮಿತವಲ್ಲ. ಸೃಜನಶೀಲತೆ ಮಗುವಿನ ಪ್ರತಿ ಹಂತದ ಬೆಳವಣಿಗೆಯಲ್ಲಿ ಸಕಾರಾತ್ಮಕವಾದ ಪರಿಣಾಮ ಬೀರುತ್ತದೆ. ಹಾಗೆಯೇ ಮಕ್ಕಳಲ್ಲಿ ನಾವು ಸೃಜನಶೀಲತೆಯ ಪ್ರಕ್ರಿಯೆಗೆ ಪ್ರಾಮುಖ್ಯತೆ ಕೊಡಬೇಕೇ ಹೊರತು ಅದರಿಂದ ಉಂಟಾದ ಉತ್ಪನ್ನಗಳಿಗೋ ಅಥವಾ ಫಲಗಳಿಗೋ ಅಲ್ಲ.

ಹಲವಾರು ಅಧ್ಯಯನಗಳ ಪ್ರಕಾರ ಚಿಕ್ಕ ಮಕ್ಕಳಲ್ಲಿ ಕಲ್ಪನಾಶಕ್ತಿ ಅಗಾಧವಾಗಿರುತ್ತದೆ. ಈ ಮಕ್ಕಳು ಸಹಜವಾಗಿ, ತಮ್ಮ ಕಲ್ಪನಾಶಕ್ತಿಗೆ ಅನುಗುಣವಾಗಿ ಸುತ್ತಮುತ್ತಲಿನ ಪರಿಸರವನ್ನು ಅನ್ವೇಷಿಸುತ್ತಾರೆ. ಹೊಸತು ತಯಾರಿಸುತ್ತಾರೆ, ಕುತೂಹಲದಿಂದ ನೊಡುತ್ತಾರೆ, ಕಲ್ಪಿಸುತ್ತಾರೆ ಎಂದೇ ಪ್ರತಿಪಾದಿಸಿದರೂ ನಾವು ಅವುಗಳಿಗೆ ನೀಡುವ ಅವಕಾಶಗಳೆಷ್ಟು ಎಂಬುದನ್ನು ಮಾತ್ರ ಈ ವರೆವಿಗೂ ಚಿಂತನೆಯನ್ನೇ ನಡೆಸಿಲ್ಲ.

ಶಿಕ್ಷಣವ್ಯವಸ್ಥೆ, ಸಾಮಾಜಿಕ ನಿಬರ್ಂಧಗಳು, ಮಕ್ಕಳ ಸೃಜನಶೀಲತೆಯನ್ನು ಕಡಿಮೆ ಮಾಡುತ್ತಿವೆಯೇ?  ಪೋಷಕರಾಗಿ ನಮ್ಮ ಪಾತ್ರವೇನು? ಶಿಕ್ಷಣ ಎನ್ನುವುದು ಈಗಿನ ಕಾಲದಲ್ಲಿ ಅತ್ಯಗತ್ಯ. ಆದರೆ ಶಾಲೆಯ ಪಠ್ಯಕ್ರಮ ಆಧಾರಿತ ಶಿಕ್ಷಣದಲ್ಲೂ ಸೃಜನಶೀಲತೆ ಬೆಳೆಸುವುದಕ್ಕೆ ಸಾಧ್ಯವೇ? ಹೌದು ಎನ್ನುತ್ತದೆ ಅಧ್ಯಯನಗಳು.

‘ರಸ್’ ಎಂಬ ಮನಃಶಾಸ್ತ್ರಜ್ಞ ಸೃಜನಶೀಲತೆ ಮತ್ತು ಮನೋವೈಜ್ಞಾನಿಕ ಪ್ರಕ್ರಿಯೆಗಳ ಸಂಬಂಧವನ್ನು ತಿಳಿಯಲು ಸಂಶೋಧನೆ ನಡೆಸಿದ. ಮುಖ್ಯವಾಗಿ ಶಾಲಾ ವಾತಾವರಣದಲ್ಲಿ ಹೇಗೆ ಚಿಕ್ಕಮಕ್ಕಳಲ್ಲಿ ಸೃಜನಶೀಲತೆ ಪ್ರೋತ್ಸಾಹಿಸಬಹುದು ಎಂದು ತಿಳಿಯಲು ಈ ಅಧ್ಯಯನ ನಡೆಸಿದ. ಸೃಜನಶೀಲತೆ ಎನ್ನುವಂಥದ್ದು ಕೇವಲ ವಿಭಿನ್ನವಾಗಿ ಯೋಚಿಸುವ ಶಕ್ತಿಯಲ್ಲ. ಇದಕ್ಕೂ ಮೀರಿದ್ದು ಎಂಬ ಸಿದ್ಧಾಂತವನ್ನು ನೀಡಿದ. ಇದೆಲ್ಲವನ್ನೂ ನಾವು ಅರಿಯಬೇಕಿದೆ, ಶಾಲೆ ಹಾಗೂ ಮನೆಗಳು ಸೃಜನಶೀಲತೆಯ ಬೆಳವಣಿಗೆಗೆ ಪೂರಕವಾಗಿದ್ದರೆ ಮಕ್ಕಳು ಸಮಗ್ರ ಅಭಿವೃದ್ಧಿ ಹೊಂದುವ ಜೊತೆಗೆ ಸೃಜನಾತ್ಮಕ ವ್ಯಕ್ತಿತ್ವ ಹೊಂದಿ ಸಾಧಕರಾಗುವುದರಲ್ಲಿ ಸಂದೇಹವೇ ಇಲ್ಲ.

ಮಕ್ಕಳೆಂಬ ಸೃಜನಶೀಲ ವ್ಯಕ್ತಿತ್ವದ ಬೆನ್ನುಹತ್ತಿ ನಾವು ಹೊರಡಬೇಕಿದೆ, ಮಗುವಿನಲ್ಲಿರುವ ಅಗಾಧವಾದ ಸೃಜನಶೀಲತೆಯನ್ನು ಹೊರಗೆ ತರುವತ್ತ ಕೊಂಚವಾದರೂ ಚಿಂತನೆ ನಡೆಸಬೇಕಿದೆ. ಅಪಾರ ಹೊಸತನದ ಶಕ್ತಿಯ ಕಲ್ಮಷವೇ ಇಲ್ಲದ ಮುಗ್ದ ಮಗುವಿನ ಸುಂದರ ಜೀವನಕ್ಕೆ ನಮ್ಮ ಈಗಿನ ನಡೆ ಪೂರಕವಾಗಬೇಕಿದೆ, ಹಾಗಾಗಿ ನಾವು ಮಕ್ಕಳ ಸೃಜನಶೀಲತೆಯ ಅಭಿವ್ಯಕ್ತಿಗೆ ಅವಕಾಶ ನೀಡಬೇಕಿದೆ, ಈ ಬಗ್ಗೆ ಚಿಂತಿಸಬೇಕಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Kumta News, Trending

Explore More:

About Ganesh Joshi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...