
ಕಾರವಾರ: ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ತಪ್ಪು ಮಾಹಿತಿ ನೀಡಿ ಬಂದರು ವಿಸ್ತರಣೆ ಮಾಡಲಾಗುತ್ತಿದೆ. ಮೀನುಗಾರರು ಕರಾವಳಿಯ ಮೂಲ ನಿವಾಸಿಗಳಾಗಿದ್ದು ಅವರ ಬದುಕನ್ನು ಛಿದ್ರಗೊಳಿಸಿ ಮಾಡುವ ಅಭಿವೃದ್ದಿ ಕೆಲಸಗಳಿಗೆ ತಮ್ಮ ವಿರೋಧವಿದೆ ಎಂದು ಮೀನುಗಾರಿಕಾ ಇಲಾಖೆ ಮಾಜಿ ಸಚಿವ ಪ್ರಮೋದ ಮದ್ವರಾಜ್ ಹೇಳಿದರು.
ಸಾಗರಮಾಲಾ ಯೋಜನೆ ಅಡಿ ಬಂದರು ವಿಸ್ತರಣೆಗೊಳ್ಳುವ ಸ್ಥಳಕ್ಕೆ ಭೇಟಿ ನೀಡಿದ ಅವರು ಮೀನುಗಾರರು ಹಾಗೂ ಬಂದರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕೋಟಾ ಶ್ರೀನಿವಾಸ ಪೂಜಾರಿ ಅವರು ಮೀನುಗಾರಿಕಾ ಸಚಿವರಾಗಿ ಕಾರವಾರಕ್ಕೆ ಬರಬೇಕು. ಬಂದರು ಸಚಿವರಾಗಿ ಅಲ್ಲ. ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ನೌಕಾನೆಲೆ ಯೋಜನೆಗಾಗಿ ಮೀನುಗಾರರು 11 ಕಡಲತೀರಗಳನ್ನು ಕಳೆದುಕೊಂಡಿದ್ದಾರೆ. ಈಗ ನಗರದಲ್ಲಿ ಇರುವ ಏಕೈಕ ಕಡಲತೀರವನ್ನು ಬಂದರು ವಿಸ್ತರಣೆಗಾಗಿ ಕಸಿದುಕೊಳ್ಳುವದು ಸರಿಯಲ್ಲ ಎಂದರು. ಸ್ಥಳದಲ್ಲಿದ್ದ ಮೀನುಗಾರರು ಅಧಿಕಾರಿಗಳು ನೀಡುತ್ತಿರುವ ತಪ್ಪು ಮಾಹಿತಿಗಳ ಬಗ್ಗೆ ಗಮನ ಸೆಳೆದರು. ಕೂಡಲೇ ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕರೆ ಮಾಡಿದ ಪ್ರಮೋದ ಮದ್ವರಾಜ್, ಅವರೊಂದಿಗೆ ಚರ್ಚೆ ನಡೆಸಿದರು. ತಮ್ಮ ಸೂಚನೆ ಮೇರೆಗೆ ಮೀನುಗಾರರ ಭೇಟಿ ಮಾಡಿದ್ದು, ಅವರಿಗೆ ತೊಂದರೆ ಆಗುವ ರೀತಿಯಲ್ಲಿ ಈ ಯೋಜನೆಯಿದೆ. ಮೀನುಗಾರರಿಗೆ ತೊಂದರೆ ಮಾಡುವದಿಲ್ಲ ಎಂಬ ತಮ್ಮ ಮಾತನ್ನು ಉಳಿಸಿಕೊಳ್ಳಿ ಎಂದು ದೂರವಾಣಿಯಲ್ಲಿ ಹೇಳಿದರು.

ನೈಸರ್ಗಿಕವಾಗಿರುವ ಕಾರವಾರ ಕಡಲತೀರದಲ್ಲಿ ಸುಲಭವಾಗಿ ಮೀನು ದೊರೆಯುತ್ತದೆ. ಈ ಯೋಜನೆ ಮೀನುಗಾರರ ಜೀವನ್ಮರಣದ ಪ್ರಶ್ನೆಯಾಗಿದ್ದು, ಪಕ್ಷಬೇಧ ಮರೆತು ಕೆಲಸ ಮಾಡಬೇಕಿದೆ ಎಂದರು. ಕಚೇರಿಯಲ್ಲಿ ಸಭೆ ಮಾಡುವ ಬದಲು ಸಮುದ್ರ ತೀರದಲ್ಲಿರುವ ಜನರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಪ್ರಮೋದ ಮಧ್ವರಾಜ್ ಹೇಳಿದರು. ಅಭಿವೃದ್ದಿಗೆ ತಮ್ಮ ವಿರೋಧವಿಲ್ಲ. ಆದರೆ, ಮೀನುಗಾರರಿಗೆ ತೊಂದರೆ ಆಗಬಾರದು ಎಂದರು.
- ಉಜ್ವಲಕುಮಾರ ಘೋಷ್ ವಿರುದ್ದ ಕಿಡಿ
ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಉಜ್ವಲಕುಮಾರ ಘೋಷ್ ಆಗಲೂ ಮೀನುಗಾರರಿಗೆ ತೊಂದರೆ ನೀಡಿದ್ದರು. ಈಗಲೂ ಅವರು ಬಂದರು ಇಲಾಖೆಗೆ ತೆರಳಿ ಮೀನುಗಾರರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಇದು ತಮ್ಮ ಗಮನಕ್ಕಿರಲಿ ಎಂದು ಪ್ರಮೋದ ಮದ್ವರಾಜ್ ದೂರವಾಣಿಯಲ್ಲಿ ಸಚಿವರಿಗೆ ತಿಳಿಸಿದರು. ಆ ನಂತರ ಮೀನುಗಾರರೊಂದಿಗೂ ಅವರು ಇದೇ ಮಾತನ್ನು ಪುನರುಚ್ಚರಿಸಿದರು.

Leave a Comment