
ಹೆಣ್ಣಿನ ಹಣೆಯ ಮೇಲಿನ ಕುಂಕುಮ ನಮ್ಮ ಸನಾತನ ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕ.ಅಲಂಕಾರದಲ್ಲಿ ಕುಂಕುಮಕ್ಕೆ ಪ್ರಥಮ ಸ್ಥಾನ. ಮನೆಗೆ ಆಗಮಿಸಿದ ಮುತೈದೆಯರಿಗೆ ಗೌರವಪೂರ್ವಕವಾಗಿ ಅರಸಿಣ ಕುಂಕುಮ ಕೊಡುವ ಪದ್ಧತಿ ಇಂದಿಗೂ ಇದೆ ಮುಂದೆಯೂ ಇರುತ್ತೆ.
ಯೋಗಶಾಸ್ತ್ರದ ಪ್ರಕಾರ ಗಂಗಾ ಯಮುನಾ ಸರಸ್ವತಿ ಎಂಬ ಮೂರು ನಾಡಿಗಳ ಸಂಗಮ ಸ್ಥಳ ಹಣೆ. ಈ ಸ್ಥಳದಲ್ಲಿ ಕುಂಕುಮ ಇಡುವುದರಿಂದ ಬಿಸಲಿನ ಅತಿ ನೀಲ ಕಿರಣಗಳು ದೇಹವನ್ನು ಭಾದಿಸಲಾರವು. ಕುಂಕುಮವು ಶರೀರ ಹಾಗೂ ರಕ್ತನಾಳಗಳಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಿ, ರಕ್ತದೊತ್ತಡ ಹಾಗೂ ಆಂತರಿಕ ರಕ್ತಸ್ರಾವವನ್ನು ನಿಯಂತ್ರಿಸುತ್ತದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಕುಂಕುಮ ಬಹು ಸಹಕಾರಿ.

ಪೂಜೆ ಮಾಡುವಾಗ ಹೆಬ್ಬೆರಳು ಹಾಗೂ ಮಧ್ಯದ ಬೆರಳಿಂದ ಹಣೆಗೆ ಕುಂಕುಮ ಇಟ್ಟುಕೊಂಡರೆ ಮನದಲ್ಲಿನ ಬಯಕೆಗಳು ಈಡೇರುತ್ತವೆ. ಹಣೆಗೆ ಕುಂಕುಮ ಇಡುವಾಗ ಹೆಬ್ಬೆರಳಿನಿಂದ ತಿದ್ದಿಕೊಂಡರೆ ಉತ್ತಮ ಶಕ್ತಿ ಬರುತ್ತದೆ. ಮಧ್ಯದ ಬೆರಳಿಂದ ತಿದ್ದಿಕೊಂಡರೆ ಆಯುರಾರೋಗ್ಯ ಲಭಿಸುತ್ತದೆ. ತೋರು ಬೆರಳಿಂದ ತಿದ್ದಿಕೊಂಡರೆ ಸರ್ವ ಸ್ವಾತಂತ್ರ್ಯ ಸಿಗುತ್ತದೆ ಎಂಬ ನಂಬಿಕೆ ಗುರು ಹಿರಿಯರಲ್ಲಿದೆ.
ಇದೆಲ್ಲ ಪರಿಶುದ್ಧವಾದ ಕುಂಕುಮದಿಂದ ಮಾತ್ರ ಸಾಧ್ಯವೇ ವಿನಹ ಮಾರುಕಟ್ಟೆಗಳಲ್ಲಿ ಸಿಗುವ ರಾಸಾಯನಿಕ ಮಿಶ್ರಣದ ಕುಂಕುಮದಿಂದಲ್ಲ.ನಾನಾ ರೀತಿಯ ಕುಂಕುಮಗಳು ಮಾರುಕಟ್ಟೆಯಲ್ಲಿ ದೊರೆತರು, ಅವೆಲ್ಲ ಕಲಬೆರಕೆ ಕುಂಕುಮಗಳೇ…!

ಪರಿಶುದ್ಧವಾದ ಕುಂಕುಮ ತಯಾರಿಸುವ ವಿಧಾನ:-
1.ಉತ್ತಮವಾದ ಅರಸಿಣ ಕೊಂಬು ಅರ್ಧ kg
ಸ್ಫಟಿಕ 25 ಗ್ರಾಂ
ಬಿಳಿಗಾರ 25 ಗ್ರಾಂ ಸೇರಿಸಿ ಎಲ್ಲವನ್ನು ಪುಡಿ ಮಾಡಿ ನಿಂಬೆರಸ ಬೆರೆಸುವುದು ಸಾಮಾನ್ಯ ಪದ್ಧತಿ.
2. ನಿಂಬೆ ರಸದಲ್ಲಿ ಸ್ಫಟಿಕ ಹಾಗೂ ಬಿಳಿಗಾರ ಪುಡಿ ಸೇರಿಸಿ ಅದರಲ್ಲಿ ಅರಸಿಣ ಕೊಂಬಿನ ಚೂರುಗಳನ್ನು ಹಾಕಿ ಎರಡು ಮೂರುದಿನ ಬಿಟ್ಟು ಆನಂತರ ಅರಸಿಣ ಕೊಂಬಿನ ಚೂರುಗಳನ್ನು ನೆರಳಲ್ಲಿ ಒಣಗಿಸಿ ನುಣ್ಣಿಗೆ ಪುಡಿ ಮಾಡಬೇಕು. ಪುಡಿ ಬಣ್ಣ ಕಡಿಮೆ ಇದ್ದಲ್ಲಿ ಮತ್ತೆ ಸ್ವಲ್ಪ ನಿಂಬೆರಸ ಸೇರಿಸಿದರೆ ಒಳ್ಳೆ ಬಣ್ಣ ಬರುತ್ತೆ.
ಈ ರೀತಿಯಲ್ಲಿ ತಯಾರಿಸಿದ ಕುಂಕುಮ ಪರಿಶುದ್ಧವಾಗಿದ್ದು ಹಣೆಯಲ್ಲಿ ಧರಿಸಿದರೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.ಅರಸಿಣ ಮೈಗೆ ಕಾಂತಿ ನೀಡಿದರೆ ಸ್ಫಟಿಕ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.ಸ್ಫಟಿಕ ಕಣ್ಣುಗಳಿಗೆ ತಂಪು ನೀಡುತ್ತೆ. ಬಿಳಿಗಾರ ರಕ್ತವನ್ನು ಶುದ್ಧಗೊಳಿಸುತ್ತದೆ. ಹಾಗೂ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ನಿಂಬೆರಸವು ಅರಸಿಣದಲ್ಲಿನ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ರಕ್ತದಲ್ಲಿ ಕೊಬ್ಬಿನ ಅಂಶ ಬೆಳೆಯದಂತೆ ನೋಡಿಕೊಳ್ಳುತ್ತದೆ.



Leave a Comment